ADVERTISEMENT

ಬಡವರಿಗೆ ಅಗ್ಗದ ಅಕ್ಕಿ ಸಿದ್ದರಾಮಯ್ಯ ಸಮರ್ಥನೆ

ತಮಿಳುನಾಡಿನ ಜನ ಸೋಮಾರಿಗಳೇ- ಸಿ.ಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 11:34 IST
Last Updated 11 ಜುಲೈ 2013, 11:34 IST

ಬೆಂಗಳೂರು: `ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ವಿತರಿಸಿದರೆ ಜನರು ಸೋಮಾರಿಗಳಾಗುತ್ತಾರೆ ಎಂಬ ಟೀಕೆ ರಾಜಕೀಯಪ್ರೇರಿತವಾದುದು ಹಾಗೂ ಅರ್ಥಹೀನ. ಹಾಗಾದರೆ ತಮಿಳುನಾಡು, ಒಡಿಶಾ, ಆಂಧ್ರ ಪ್ರದೇಶದ ಜನರೆಲ್ಲ ಸೋಮಾರಿಗಳಾಗಿದ್ದಾರೆಯೇ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ.ಜಿ.ಯಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಅನ್ನಭಾಗ್ಯ' ಯೋಜನೆಗೆ ನಗರದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

`ಕಾಳಜಿ ಹಾಗೂ ಬದ್ಧತೆ ಇದ್ದವರು ಮಾತ್ರ ಬಡವರ ಪರವಾಗಿ ಕೆಲಸ ಮಾಡಲು ಸಾಧ್ಯ. ಬದ್ಧತೆ ಇಲ್ಲದವರು ಹಾಗೂ ಬಡವರ ಪರ ಇಲ್ಲದವರು ಕೊಂಕು ಮಾತನಾಡುತ್ತಾರೆ. ಅಕ್ಕಿ ಪಡೆಯುವವರು ಧ್ವನಿ ಇಲ್ಲದವರು. ಧ್ವನಿ ಇದ್ದಿದ್ದರೆ ಟೀಕಾಕಾರರಿಗೆ ಉತ್ತರ ಕೊಡುತ್ತಿದ್ದರು. ಇಂತಹ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

`ಲೋಕಸಭಾ ಚುನಾವಣೆಯ ಉದ್ದೇಶ ಹಾಗೂ ಮತಕ್ಕಾಗಿ ಈ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವುದು ಅಲ್ಲ. ಹಸಿದವರಿಗೆ ಹಾಗೂ ಅನ್ಯಾಯ ಆದವರಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಹಸಿದವರಿಗೆ ಅನ್ನ ಕೊಡುವುದು ಅತ್ಯುತ್ತಮ ಕೆಲಸ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ' ಎಂದು ಅವರು ಸ್ಪಷ್ಟಪಡಿಸಿದರು.

`ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದರಿಂದ ರಾಜ್ಯ ಕೊಳ್ಳೆ ಹೋಗುವುದಿಲ್ಲ. ಆದರೆ, ಯೋಜನೆಯ ಲಾಭ ಎಲ್ಲಾ ಅರ್ಹರಿಗೆ ದೊರಕಬೇಕು. ಪಡಿತರ ಚೀಟಿಗಾಗಿ ಬಂದಿರುವ 12 ಲಕ್ಷ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಚೀಟಿ ದೊರಕುವಂತೆ ಮಾಡಬೇಕು.

ಫಲಾನುಭವಿಗಳಿಗೆ ಕಡಿಮೆ ಪ್ರಮಾಣದ ಅಕ್ಕಿ ವಿತರಣೆ ಆಗದಂತೆ ನೋಡಿಕೊಳ್ಳಬೇಕು. `ಇ-ಪಡಿತರ' ವ್ಯವಸ್ಥೆಯನ್ನು ಎಲ್ಲ ಕಡೆಗಳಲ್ಲಿ ಜಾರಿಗೊಳಿಸಿ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು' ಎಂದು ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

`ರೈತರು ಅಧಿಕ ಪ್ರಮಾಣದಲ್ಲಿ ಭತ್ತ, ರಾಗಿ, ಜೋಳವನ್ನು ಬೆಳೆಯಬೇಕು. ರೈತರಿಗೆ ನ್ಯಾಯವಾದ ಬೆಲೆ ನೀಡಲಾಗುವುದು. ನಮ್ಮಲ್ಲೇ ಹೆಚ್ಚು ಆಹಾರ ಧಾನ್ಯ ದೊರಕಿದರೆ ಯೋಜನೆ ಸಮಗ್ರ ಅನುಷ್ಠಾನಕ್ಕೆ ಸುಲಭವಾಗುತ್ತದೆ' ಎಂದು ವಿನಂತಿ ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, `ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಬೇಕಿದೆ. ಬೋಗಸ್ ಕಾರ್ಡ್ ಹಾಗೂ ಕಳ್ಳ ಸಾಗಣೆಗೆ ಕಡಿವಾಣ ಹಾಕುವುದೇ ದೊಡ್ಡ ಸವಾಲು. ಸೋರಿಕೆ ಆಗದಂತೆ ತಡೆಗಟ್ಟಬೇಕಿದೆ. ಮುಖ್ಯವಾಗಿ ಇಲಾಖೆಯ ಸುಧಾರಣೆ ಆಗಬೇಕು. ಇದಕ್ಕೆಲ್ಲ ನಿಯಂತ್ರಣ ಹೇರಲು ಪ್ರತಿವರ್ಷ ಪಡಿತರ ಚೀಟಿಗಳನ್ನು ಪರಿಷ್ಕರಣೆ ಮಾಡಲು ಯೋಜಿಸಲಾಗಿದೆ' ಎಂದರು.

`ಶಾಲಾ ಮಕ್ಕಳಿಗೆ ಹಾಲು' : `ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಂದಿನಿ ಹಾಲು ವಿತರಿಸಲಾಗುವುದು' ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

`ಕನ್ನಡ ಶಾಲೆ ಮುಚ್ಚಲ್ಲ'
`ರಾಜ್ಯದಲ್ಲಿ ಯಾವುದೇ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚಬಾರದು ಎಂಬ ಸೂಚನೆ ನೀಡಲಾಗಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು.

`ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಶಾಲೆಗೆ ಬರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಡವರಿಗೂ ಗುಣಮಟ್ಟದ ಶಿಕ್ಷಣ ದೊರೆತು ಅವರು ಮುಖ್ಯವಾಹಿನಿಗೆ ಬರುವಂತೆ ಆಗಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ' ಎಂದರು.

ADVERTISEMENT

ಟೀಕಾಕಾರರಿಗೆ ಸಿ.ಎಂ. ತಿರುಗೇಟು
ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗುತ್ತಾರೆ, ಕೂಲಿಗೆ ಜನರು ಸಿಗುವುದಿಲ್ಲ ಎಂಬ ಟೀಕೆ ಕೇಳಿ ಬಂದಿದೆ. ತಮಿಳುನಾಡಿನಲ್ಲಿ ಉಚಿತವಾಗಿ ತಿಂಗಳಿಗೆ 20 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಒಂದು ರೂಪಾಯಿಗೆ ಒಂದು ಕೆ.ಜಿ.ಯಂತೆ ತಿಂಗಳಿಗೆ 20 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಆದರೆ, ಅಲ್ಲಿನ ಜನರು ಈಗ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.