ADVERTISEMENT

ಬಡಿಗೆಗಳಿಂದ ಕಾದಾಡಿ ‘ಬನ್ನಿ ಹಬ್ಬ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:28 IST
Last Updated 1 ಅಕ್ಟೋಬರ್ 2017, 19:28 IST
ಬಡಿಗೆಗಳಿಂದ ಕಾದಾಡಿ ‘ಬನ್ನಿ ಹಬ್ಬ’
ಬಡಿಗೆಗಳಿಂದ ಕಾದಾಡಿ ‘ಬನ್ನಿ ಹಬ್ಬ’   

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಹೊಳಗುಂದ ಮಂಡಲ ನೆರಣಕಿ ಗ್ರಾಮದ ದೇವರಮಲ್ಲಯ್ಯನ ಗುಡ್ಡದಲ್ಲಿ, ವಿಜಯದಶಮಿ ಅಂಗವಾಗಿ ಶನಿವಾರ ತಡರಾತ್ರಿ ಭಕ್ತರು ಬಡಿಗೆಗಳನ್ನು ಹಿಡಿದುಕೊಂಡು ಕಾದಾಡಿದರು. ಇಡೀ ಗುಡ್ಡ ರಣಾಂಗಣದಂತೆ ಭಾಸವಾಗುತ್ತಿತ್ತು.

ದೊಡ್ಡ ಪಂಜುಗಳ ಬೆಳಕಿನಲ್ಲಿ ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತಾ ದೇವರ ಉತ್ಸವಮೂರ್ತಿಯನ್ನು ಗ್ರಾಮಕ್ಕೆ ಕೊಂಡೊಯ್ಯಲು ಮುಂದಾಗುತ್ತಿದ್ದಂತೆಯೇ ಬಡಿದಾಟ ಆರಂಭಿಸಿದ ಭಕ್ತರು, ಘೋಷಣೆ ಕೂಗುತ್ತ ‘ಬನ್ನಿ ಉತ್ಸವ’ ಆಚರಿಸಿದರು. ಭಾನುವಾರ ಬೆಳಗಿನ ಜಾವದವರೆಗೂ ನಡೆದ ಕಾದಾಟ ನೋಡಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದ ಗ್ರಾಮಗಳ ಸಹಸ್ರಾರು ಜನ ಸೇರಿದ್ದರು.

ಈ ಕಾದಾಟದಲ್ಲಿ ಗಾಯಗೊಂಡಿದ್ದ ಕೆಲವರಿಗೆ ಸ್ಥಳದಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೂಡ ಇತ್ತು.

ADVERTISEMENT

‘ಈ ಉತ್ಸವ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಭಕ್ತರು ರಕ್ಷಣೆಗಾಗಿ ಬಡಿಗೆಗಳನ್ನು ಉಪಯೋಗಿಸುತ್ತಾರೆಯೇ ಹೊರತು ಕಾದಾಟಕ್ಕೆ ಅಲ್ಲ’ ಎನ್ನುತ್ತಾರೆ ದೇವಸ್ಥಾನ ಸಮಿತಿ ಉಪಾಧ್ಯಕ್ಷ ನೆರಣಕಿ ಮಲ್ಲಿಕಾರ್ಜುನಗೌಡ.

ರಥೋತ್ಸವ, ಗೊರಯ್ಯನವರು ಕಬ್ಬಿಣದ ಸರಪಳಿ ತುಂಡು ಮಾಡುವುದು, ಗೊರವಯ್ಯನವರ ಆಟ, ಊಟ ಹಾಗೂ ಕಡಬಿನ ಕಾಳಗ ಹೀಗೆ ದೇವರಮಲ್ಲಯ್ಯನಗುಡ್ಡದಲ್ಲಿ ಐದು ದಿನಗಳ ಕಾರ್ಯಕ್ರಮ ಇರುತ್ತದೆ.

ಕಾರಣಿಕ

ಇಲ್ಲಿನ ಕಾರಣಿಕ ಉತ್ಸವದ ಭವಿಷ್ಯವಾಣಿ ಬಗ್ಗೆ ಭಕ್ತರಿಗೆ ಅಪಾರ ನಂಬಿಕೆ ಇದ್ದು, ಅದನ್ನು ಕೇಳಲೆಂದೇ ಭಾನುವಾರ ಸಾವಿರಾರು ಭಕ್ತರು ನೆರೆದಿದ್ದರು.

ಅರ್ಚಕ ಗಿರಿ ಮಲ್ಲಯ್ಯ ಸ್ವಾಮಿ, ‘ಶಿವ, ಗಂಗೆ, ಪಾರ್ವತಿ ಸವಾರಿ ಮಾಡ್ಯಾರ ಧನುಸ್ಸು ಹಿಡಿದು ಭೂ ಲೋಕದಲ್ಲಿ... ಬಹುಪರಾಕ್‌.. ನಾಲ್ಕು ಸಾವಿರದ ಏಳುನೂರು ರೂಪಾಯಿ ಅರಳೆ... ಹದಿನಾಲ್ಕು ನೂರು ರೂಪಾಯಿ ಜೋಳ... ಮೂರು ಆರು... ಆರು ಮೂರಾದೀತು ಬಹುಪರಾಕ್’ ಎಂದು ಕಾರಣಿಕ ನುಡಿದರು.

‘ದೇಶದಲ್ಲಿ ಯುದ್ಧದ ಭೀತಿ ಎದುರಾಗಬಹುದು. ಹಿಂಗಾರು ಮಳೆ ಅಧಿಕವಾಗುತ್ತದೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಆರಂಭದಲ್ಲಿ ಬೆಲೆ ಕಡಿಮೆ ಇದ್ದು ನಂತರದ ದಿನಗಳಲ್ಲಿ ಏರಿಕೆಯಾಗಿ ಮತ್ತೆ ಕಡಿಮೆಯಾಗುತ್ತದೆ ಎನ್ನುವುದು ದೈವವಾಣಿಯ ಸಾರಾಂಶ’ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ನೆರಣಕಿಯ ಮಲ್ಲಿಕಾರ್ಜುನಗೌಡ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.