ADVERTISEMENT

ಬಡ್ಡಿ ಪಾವತಿಸದಿದ್ದರೆ ಸೂಕ್ತ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:44 IST
Last Updated 16 ಜೂನ್ 2017, 19:44 IST
ಬಡ್ಡಿ ಪಾವತಿಸದಿದ್ದರೆ ಸೂಕ್ತ ಕ್ರಮ
ಬಡ್ಡಿ ಪಾವತಿಸದಿದ್ದರೆ ಸೂಕ್ತ ಕ್ರಮ   

ಬೆಂಗಳೂರು: ‘ಬೇನಾಮಿ ಖಾತೆಯಲ್ಲಿ ಇಟ್ಟಿದ್ದ ₹ 250 ಕೋಟಿಗೆ  ಹದಿನೈದು ದಿನಗಳಲ್ಲಿ ಬಡ್ಡಿ ನೀಡದಿದ್ದರೆ ಸಿಂಡಿಕೇಟ್‌ ಬ್ಯಾಂಕ್‌ ವಿರುದ್ಧ  ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಎಚ್ಚರಿಕೆ ನೀಡಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಬೇನಾಮಿ ಖಾತೆ ತೆರೆದು ಜಮೆ ಮಾಡಲಾಗಿತ್ತು.  ಸಿಂಡಿಕೇಟ್‌ ಬ್ಯಾಂಕ್‌ವೊಂದರಲ್ಲೇ ₹ 250 ಕೋಟಿ ಇಟ್ಟಿದ್ದರು. ಅದಕ್ಕೆ ಬ್ಯಾಂಕ್‌ ಬಡ್ಡಿ ಪಾವತಿಸಿಲ್ಲ’ ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ  ತಿಳಿಸಿದರು.

‘ವಿವಿಧ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ಹಣ ಜಮೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮತ್ತು ಸಿವಿಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕಿನಲ್ಲಿದ್ದ ಹಣವನ್ನು  ಖಜಾನೆಗೆ ಜಮೆ ಮಾಡಿದ್ದೇವೆ’ ಎಂದು ಪಾಟೀಲ ಹೇಳಿದರು.

2007–08 ರಿಂದ 2013–14 ರ ಅವಧಿಯಲ್ಲಿ ಬೇನಾಮಿ ಖಾತೆಗಳನ್ನು ತೆರೆಯಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಪುನತಿ ಶ್ರೀಧರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆವು .  ವರದಿ ಆಧರಿಸಿ ಸರ್ಕಾರದ ಹಿಂದಿನ ಉಪ ಕಾರ್ಯದರ್ಶಿ ರಾಮಕೃಷ್ಣ ಮತ್ತು ಪತ್ರಾಂಕಿತ ವ್ಯವಸ್ಥಾಪಕ ಬಿ.ಎಸ್‌.ರಾಯಗೇರಿ ವಿರುದ್ಧ ದೋಷಾರೋಪ ಹೊರಿಸಿ ಅಮಾನತು ಮಾಡಲಾಗಿದೆ ಎಂದು ಪಾಟೀಲ ತಿಳಿಸಿದರು.
*
ಕೇಂದ್ರ ಸರ್ಕಾರ ವಿದ್ಯುತ್‌ ಸಂಪರ್ಕಕ್ಕೆ ಕೊಟ್ಟ ಅನುದಾನವನ್ನು ವಿದ್ಯುತ್‌ ಬಿಲ್‌ ಚುಕ್ತಾ ಮಾಡಲು ರಾಜ್ಯ ಬಳಸಿದೆ.
ಕೋಟ ಶ್ರೀನಿವಾಸ ಪೂಜಾರಿ
ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.