ADVERTISEMENT

ಬಡ್ತಿ ಮೀಸಲಾತಿ: ಪರಿಷ್ಕೃತ ಜ್ಯೇಷ್ಠತಾ ಪಟ್ಟಿಗೆ ಚಾಲನೆ?

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ವಿಧಾನಸಭೆ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌
ವಿಧಾನಸಭೆ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌   

ಬೆಂಗಳೂರು: ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ವಿಧಾನಸಭೆ ಸಚಿವಾಲಯದಲ್ಲೂ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಗುವ ಸಂಭವವಿದೆ.

‘ನ್ಯಾಯಾಲಯ, ತೀರ್ಪು ಜಾರಿಗೆ ನಿಗದಿಪಡಿಸಿದ್ದ ಏಪ್ರಿಲ್‌ 16ರ ಗಡುವು ಮುಗಿದರೂ, ವಿಧಾನಸಭೆ ಸಚಿವಾಲಯ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ತಯಾರಿಸದೆ ನಿರ್ಲಕ್ಷ್ಯ ತೋರಿದೆ’ ಎಂದು ಆರೋಪಿಸಿ ಕೆಲವು ಅಧಿಕಾರಿಗಳು ‘ಸುಪ್ರೀಂ’ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಈ ಮಧ್ಯೆ, ವಿಧಾನಸಭೆ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌  ಮಂಗಳವಾರ ಸಚಿವಾಲಯ ಅಧಿಕಾರಿಗಳ ಸಭೆ ಕರೆದಿದ್ದು, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷರು, ಇದೇ ವೇಳೆ ಬಡ್ತಿ ಮೀಸಲಿಗೆ ಸಂಬಂಧಿಸಿದ ತೀರ್ಪು ಜಾರಿ ಬಗ್ಗೆಯೂ ಪರಿಶೀಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪು ವಿಧಾನಸಭೆ ಸಚಿವಾಲಯದಲ್ಲಿ ಜಾರಿಯಾಗಿಲ್ಲ ಎಂಬ ಸಂಗತಿ ಅಧ್ಯಕ್ಷರ ಗಮನಕ್ಕೆ ಬಂದಿದೆ. ಇತರ ಕೆಲವು ಆಡಳಿತಾತ್ಮಕ ವಿಷಯಗಳ ಜೊತೆಗೆ ಈ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದೂ ಮೂಲಗಳು ವಿವರಿಸಿವೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಜಾರಿಗೊಳಿಸಿವೆ. ಹೀಗಾಗಿ, ವಿಧಾನಸಭೆ ಸಚಿವಾಲಯದಲ್ಲೂ ತೀರ್ಪು ಜಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಪತ್ರ ಬರೆದಿದ್ದಾರೆ. ಆದರೆ, ಅವರ ಮಾತನ್ನು ಕಡೆಗಣಿಸಲಾಗಿದೆ. ವಿಧಾನ ‍ಪರಿಷತ್‌ ಸಚಿವಾಲಯ 1978ಕ್ಕೆ ಬದಲಾಗಿ 1998ರಿಂದ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದೆ.

‘1998ರಲ್ಲಿ ವಿಧಾನಮಂಡಲ ವಿಭಜನೆ ಆಗುವುದಕ್ಕೆ ಮುಂಚಿನ ಮಾಹಿತಿ (ಅಧಿಕಾರಿಗಳು ಹಾಗೂ ಸಿಬ್ಬಂದಿ ಬಡ್ತಿಗೆ ಸಂಬಂಧಿಸಿದ್ದು) ಲಭ್ಯವಿಲ್ಲದೆ ಇರುವುದರಿಂದ 1978ರಿಂದ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ತಯಾರಿಸಲು ಸಾಧ್ಯವಾಗಿಲ್ಲ’ ಎಂದು ಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮಿ ಮುಖ್ಯ ಕಾರ್ಯದರ್ಶಿಗೆ ಇತ್ತೀಚೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಸುಮಾರು 1,500 ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ತೀರ್ಪು ಜಾರಿಯಾದರೆ ಸಚಿವಾಲಯ ಕಾರ್ಯದರ್ಶಿ ಎಸ್‌. ಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಕೆಳ ಹಂತದ ಕೆಲವು ಅಧಿಕಾರಿ
ಗಳು ಮುಂಬಡ್ತಿ ಹೊಂದಲಿದ್ದಾರೆ.

ಪರಿಷ್ಕೃತಾ ಜ್ಯೇಷ್ಠತಾ ಪಟ್ಟಿಯನ್ನು 1978ರಿಂದಲೇ ಸಿದ್ಧಪಡಿಸಬೇಕು ಎಂದು ಮನವಿ ಮಾಡಿ ವಿಧಾನಸಭೆ ಜಂಟಿ ಕಾರ್ಯದರ್ಶಿ ಶಶಿಕಲಾ ಭಟ್‌ ಹಾಗೂ ನಿರ್ದೇಶಕಿ ವಿಶಾಲಾಕ್ಷಿ ನೇತೃತ್ವದ ಅಧಿಕಾರಿಗಳ ತಂಡ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಈಚೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಮನ್ನಣೆ ಸಿಗದಿದ್ದರಿಂದ ಈಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ನಿಲ್ಲದ ನೇಮಕಾತಿ

ವಿಧಾನಸಭೆ ಸಚಿವಾಲಯದ ನೇಮಕಾತಿಗಳ ಬಗ್ಗೆ ಆಕ್ಷೇಪ, ಅಪಸ್ವರ ಕೇಳಿ ಬಂದಿದ್ದರೂ ಈ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿದಿದೆ.

ಹೊಸದಾಗಿ ನೇಮಕಾತಿ ಆದೇಶ ಪಡೆದಿರುವ ಸುಮಾರು 39 ಮಂದಿ ಕಿರಿಯ ಸಹಾಯಕರು, ಸ್ವೀಪರ್‌ಗಳು ಹಾಗೂ ದಲಾಯತ್‌ಗಳು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದರಿಂದ ಕೆಲವರಿಗೆ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟಿರಲಿಲ್ಲ. ಈಗ ಪ್ರಕ್ರಿಯೆ ಮುಗಿದಿರುವುದರಿಂದ ನೇಮಕಾತಿ  ಪತ್ರಗಳನ್ನು ವಿತರಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನೇಮಕಾತಿ ಆದೇಶಗಳನ್ನು ಯಾವಾಗ ವಿತರಿಸಲಾಗಿದೆ. ಯಾವ ದಿನಾಂಕ ನಮೂದಿಸಲಾಗಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ. ಆರಂಭದಲ್ಲಿ 90 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹುದ್ದೆಗಳು ಖಾಲಿ ಇಲ್ಲದಿದ್ದರೂ ಸುಮಾರು 190 ಹುದ್ದೆಗಳನ್ನು ತುಂಬಲಾಗಿದೆ ಎನ್ನಲಾಗಿದೆ. ಹೊಸ ನೇಮಕಾತಿ ಕುರಿತ ಪ್ರತಿಕ್ರಿಯೆಗೆ ಸಚಿವಾಲಯದ ಕಾರ್ಯದರ್ಶಿ ಮೂರ್ತಿ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.