ADVERTISEMENT

ಬತ್ತಕ್ಕೆ ಬಂಪರ್‌ಬೆಲೆ; ರೈತರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:30 IST
Last Updated 30 ಮೇ 2012, 19:30 IST

ದಾವಣಗೆರೆ: ಬತ್ತಕ್ಕೆ ಬಂಪರ್ ಬೆಲೆ ಸಿಕ್ಕಿದೆ. ಜಿಲ್ಲೆಯ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ರೂ 1,100 ಇದ್ದ ಬತ್ತ ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಉತ್ತಮ ತಳಿಯ ಬತ್ತಕ್ಕೆ ರೂ 1,567ರಷ್ಟು ದರ ಏರಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ ಬತ್ತ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

 ಹೊನ್ನಾಳಿ, ಹರಿಹರ, ದಾವಣಗೆರೆ, ಚನ್ನಗಿರಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು `ಬಿಪಿಟಿ -5204~, `ಎಸ್‌ಎಸ್‌ಎಲ್-1798~, ಅಮಾನ್, ಜಯಶ್ರೀ, ಹಾವೇರಿ ಸೋನಾ, ಸೂಪರ್ ಫೈನ್... ಇತ್ಯಾದಿ ತಳಿಯ ಬತ್ತ ಬೆಳೆಯುತ್ತಾರೆ. ಆದರೆ, ಸೂಕ್ತ ಬೆಲೆ ಸಿಗದೇ ರೈತರು ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು.
 
ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಸರ್ಕಾರ ಕ್ವಿಂಟಲ್‌ಗೆ ರೂ 100 ಬೆಂಬಲ ಬೆಲೆ ಘೋಷಿಸಿತ್ತು. ಆದರೂ, ರೈತರು ಚೇತರಿಸಿಕೊಂಡಿರಲಿಲ್ಲ. ಪ್ರಸಕ್ತ ಬೇಸಿಗೆ ಹಂಗಾಮಿನ ಅಂತ್ಯದಲ್ಲಿ ಬತ್ತ ಬೆಳೆಗಾರರ ಅದೃಷ್ಟ ಖುಲಾಯಿಸಿದೆ.

`ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಹಂಗಾಮಿನ ಬತ್ತದ ಗುಣಮಟ್ಟ ಉತ್ಕೃಷ್ಟವಾಗಿದೆ. ಅಲ್ಲದೇ ಬತ್ತದ ಕಣಜ ಗಂಗಾವತಿ, ರಾಯಚೂರು, ಸಿಂಧನೂರು, ಸಿರುಗುಪ್ಪ ಭಾಗಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಬತ್ತ ಬೆಳೆದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶಗಳಿಗೆ ಆಧಾರವಾಗಿದ್ದ ರಾಜ್ಯದಲ್ಲಿನ ಅನೇಕ ಜಲಾಶಯಗಳು ಬತ್ತಿರುವುದರಿಂದ ಬತ್ತ ಬೆಳೆಯಲ್ಲಿ ಹಿನ್ನಡೆ ಕಂಡಿವೆ. ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯ ಕೂಡ ಬರಿದಾಗಿದೆ.

ಹಾಗಾಗಿ, ತುಂಗಾ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ಬೆಳೆ ಕಡಿಮೆಯಾಗಿದೆ. ಜತೆಗೆ ಅನ್ಯ ರಾಜ್ಯಗಳಿಗೆ ಬತ್ತ ರಫ್ತು ಮಾಡಲಾಗುತ್ತಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಬತ್ತದ ದರ ಏರಿಕೆಯಾಗಿದೆ~ ಎನ್ನುತ್ತಾರೆ ದಾವಣಗೆರೆ ಎಂಪಿಎಂಸಿ ಕಾರ್ಯದರ್ಶಿ ಆರ್.ಎಂ. ಪಾಟೀಲ್.

`ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ಬತ್ತ ಬೆಳೆಗಾರರು ಯಾಂತ್ರೀಕೃತ ನಾಟಿ ಪದ್ಧತಿ ಅನುಸರಿಸುತ್ತಿದ್ದಾರೆ. ಅಲ್ಲದೇ, ರಾಸಾಯನಿಕ ಬಳಕೆಯನ್ನೂ ಸಾಕಷ್ಟು ಕಡಿಮೆಗೊಳಿಸುವ ಮೂಲಕ ಭೂಮಿ ಸುಸ್ಥಿರತೆ ಕಾಯ್ದುಕೊಂಡಿದ್ದಾರೆ. ಬೇಸಿಗೆ ಬಿಸಿಲು ಸಹ ಉತ್ತಮವಾಗಿತ್ತು.

ತೆನೆಗಟ್ಟುವ ಸಂದರ್ಭದಲ್ಲಿ ಎರಡು ಬಾರಿ ಮುಂಗಾರು ಮಳೆ ಸುರಿಯಿತು. ಹಾಗಾಗಿ, ಬತ್ತಕ್ಕೆ ಅಷ್ಟಾಗಿ ರೋಗ ಮತ್ತು ಕೀಟ ಹಾವಳಿ ಕಾಡಲಿಲ್ಲ. ಪರಿಣಾಮವಾಗಿ ಬತ್ತ ಜೊಳ್ಳಾಗದೆ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ~ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ್.

ಇಳುವರಿ ಕುಂಠಿತ, ಕೀಟಹಾವಳಿ, ರೋಗ ಭೀತಿ ಮೆಟ್ಟಿನಿಂತು ಜಿಲ್ಲೆಯ ರೈತರು ಬೆಳೆದ ಬತ್ತಕ್ಕೆ ಮುಕ್ತ ಮಾರುಕಟ್ಟೆಯಲ್ಲಿ `ಬೆಲೆ ಕುಸಿತ~ ಎಂಬ ಭೂತಕಾಟ ಮಾತ್ರ ತಪ್ಪಿರಲಿಲ್ಲ. ಕಾರ್ಮಿಕರ ಕೊರತೆ ಇತ್ಯಾದಿ ಸಮಸ್ಯೆಗಳಿಂದ ನಲುಗಿ ಬತ್ತ ಕೃಷಿಯಿಂದ ರೈತರು ವಿಮುಖರಾಗುತ್ತ್ದ್ದಿದಾರೆ. ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸಾಮಾನ್ಯ ತಳಿಯ ಬತ್ತಕ್ಕೂ ರೂ 1,300 ದರ ನಿಗದಿಯಾಗಿರುವುದು ರೈತರ ಲವಲವಿಕೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.