ADVERTISEMENT

ಬಯಲುಸೀಮೆಗೆ ನೀರು:ಸಿ.ಎಂ

ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ, ಎರಡು ವರ್ಷದಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 20:18 IST
Last Updated 3 ಮಾರ್ಚ್ 2014, 20:18 IST

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಜಾರಿ­ಯಾದರೆ ಒಟ್ಟು 24 ಟಿಎಂಸಿ ಅಡಿ ನೀರು ಲಭ್ಯವಾಗಲಿದ್ದು, ಯಾವುದೇ ಪ್ರದೇಶಕ್ಕೂ ಹಾನಿ ಮಾಡದೆ ನೀರನ್ನು ಸಮರ್ಪಕವಾಗಿ ಬಳಸಲಾಗುವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ನಗರ ಹೊರವಲಯದಲ್ಲಿ ನಡೆದ ಸಮಾರಂಭದಲ್ಲಿ ಸೋಮ­ವಾರ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕುಡಿಯಲು 15 ಟಿಎಂಸಿ ಅಡಿ ಮತ್ತು ಕೆರೆ ತುಂಬಿಸಲು 9 ಟಿಎಂಸಿ ಅಡಿ ನೀರು ಬಳಸಿಕೊಳ್ಳಲಾಗುವುದು ಎಂದರು.

ಈ ಯೋಜನೆ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಹ ಅನು­ಕೂಲವಾಗುತ್ತದೆ. ಬಯಲುಸೀಮೆಯ ಐದು ಜಿಲ್ಲೆಗಳಿಗೂ ನೀರು ಲಭ್ಯವಾ­ಗಲಿದ್ದು, ಯಾರೂ ಆತಂಕ ಪಡಬೇಕಿಲ್ಲ ಎಂದು ಅವರು ಹೇಳಿದರು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಸುಮಾರು 2 ಸಾವಿರ ಟಿಎಂಸಿ ಅಡಿ ನೀರು ಲಭ್ಯವಿದ್ದು, ನೇತ್ರಾವತಿ ನದಿ ಜಲಾನಯನ ಪ್ರದೇಶದಲ್ಲಿ ಸುಮಾರು 400 ಟಿಎಂಸಿ ಅಡಿ ನೀರಿದೆ. ಅದರಲ್ಲಿ ಶೇ 1.2ರಷ್ಟು ನೀರನ್ನು ಮಾತ್ರ ಬಯಲುಸೀಮೆ ಜಿಲ್ಲೆಗಳಿಗೆ (24 ಟಿಎಂಸಿ ಅಡಿ) ಪೂರೈಸಲು ಉದ್ದೇಶಿಸ­ಲಾಗಿದೆ. ಪಶ್ಚಿಮಘಟ್ಟ ಪ್ರದೇಶಕ್ಕೆ ಹಾನಿ ಮಾಡಲು  ಬಯಸುತ್ತಿಲ್ಲ ಎಂದರು.

ಎತ್ತಿನಹೊಳೆ ಯೋಜನೆಗೆ ಆಡಳಿ­ತಾತ್ಮಕ ಒಪ್ಪಿಗೆ ನೀಡುವ ಮುನ್ನ ನೀರಾವರಿ ತಜ್ಞರ ಜೊತೆ ಚರ್ಚಿಸ­ಲಾಗಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಅಧ್ಯಯನ ಮಾಡಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಜ್ಞ ರಾಮ­ಪ್ರಸಾದ್‌ ಅವರ ವರದಿ ಅವಲೋಕನ ಮಾಡಲಾಗಿದೆ. ಯೋಜನೆ ಬಗ್ಗೆ ಅನಗತ್ಯ ಅಪಪ್ರಚಾರ ಮಾಡುವುದು ಮತ್ತು ಕೆಡುಕು ಉಂಟು ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ, ಬಯಲು ಸೀಮೆ ಜಿಲ್ಲೆ ಜನರಿಗೆ ಕುಡಿಯುವ ನೀರು ನೀಡಲು  ಯೋಜನೆಗೆ ಚಾಲನೆ ನೀಡಲಾಗಿದೆ.  ಚುನಾವಣೆ ದೃಷ್ಟಿಯಿಂದ ಅಲ್ಲ ಎಂದರು.

ಯೋಜನೆ ವಿರೋಧಿಸಿ ಪ್ರತಿಭಟನೆ: ಎತ್ತಿನಹೊಳೆ ಯೋಜನೆಗೆ ಶಂಕು­ಸ್ಥಾಪನೆ ನೆರವೇರಿಸುವುದನ್ನು ವಿರೋಧಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಜೆಡಿಎಸ್‌ ಮತ್ತು ವಿವಿಧ ಸಂಘಟನೆ ಸದಸ್ಯರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೈ ಮತ್ತು ತಲೆಗೆ ಕಪ್ಪು ಪಟ್ಟಿ ಧರಿಸಿಕೊಂಡು, ಕಪ್ಪು ಬಾವುಟ ಮತ್ತು ಖಾಲಿ ಪೈಪ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿ, ಕಾರ್ಯಕ್ರಮ ಸ್ಥಳದತ್ತ ನುಗ್ಗಲು ಯತ್ನಿಸಿದರು.  ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು  ತಡೆದರು.  ನಂತರ  ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಲಾಯಿತು.

ಎತ್ತಿನಹೊಳೆಯಲ್ಲಿ 6 ಟಿಎಂಸಿ ಅಡಿ ನೀರು ಲಭ್ಯವಿದ್ದರೂ 24 ಟಿಎಂಸಿ ಅಡಿಗಳಷ್ಟು ನೀರು ಇದೆ ಎಂದು ಸುಳ್ಳು ಹೇಳಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದ್ದು, ಇದು ಖಂಡನೀಯ ಎಂದು ಪ್ರತಿಭಟನಾ­ನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ನೀರು ನೀಡುವ ಸಂಸ್ಕೃತಿ ರೂಢಿಸಿಕೊಳ್ಳಿ’
ದಕ್ಷಿಣ ಕನ್ನಡ ಜಿಲ್ಲೆಯವರು ಬಂದ್‌ ಆಚರಿಸುವುದರ ಬದಲು ನೀರು ಕೊಡುವ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮನೆಗೆ ಬಂದವರನ್ನು ನಾವು ಊಟ ಕೊಡಲು ಸಾಧ್ಯ­ವಾಗದಿದ್ದರೂ ನೀರನ್ನು ಮಾತ್ರ ಖಂಡಿತ ನೀಡುತ್ತೇವೆ.  ಈ ಬಗ್ಗೆ ದಕ್ಷಿಣ ಕನ್ನಡದ ಜನರ ಜತೆಗೆ ಮತ್ತೊಮ್ಮೆ ಮಾತನಾ­ಡಲು ಸಿದ್ಧನಿದ್ದೇನೆ ಎಂದರು.

ದಕ್ಷಿಣ ಕನ್ನಡ ಬಂದ್‌ ಸಂಪೂರ್ಣ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾ­ಪು­ರದಲ್ಲಿ ಶಿಲಾನ್ಯಾಸ ನೇರವೇರಿಸಿ­ರುವುದನ್ನು ಖಂಡಿಸಿ ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿ ಸೋಮ­ವಾರ ಕರೆ ನೀಡಿದ್ದ ದಕ್ಷಿಣ ಕನ್ನಡ ಬಂದ್‌ ಸಂಪೂರ್ಣ ಯಶಸ್ವಿಯಾಗಿದ್ದು, ಎಲ್ಲಾ ವರ್ಗದ ಜನರೂ ಬಂದ್‌ಗೆ ಬೆಂಬಲ ಸೂಚಿಸಿದ್ದರು.

ನೇತ್ರಾವತಿ ನದಿಯ ನೇರ ಸಂಪರ್ಕಕ್ಕೆ ಬರುವ ಮೀನುಗಾರರು, ಮೀನು ಮಾರಾಟ­ಗಾರರು ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಬಂದ್‌ಗೆ ತಮ್ಮ ಸಂಪೂರ್ಣ ಸಹಕಾರ ನೀಡಿದರು. ಹೀಗಾಗಿ ಸಾಮಾನ್ಯ ಜನಜೀವನ ಬಂದ್‌ನಿಂದಾಗಿ ಅಸ್ತವ್ಯಸ್ತಗೊಂಡಿತು.

ಬಸ್‌ಗಳು, ಆಟೊ ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಸರ್ಕಾರಿ ಬಸ್‌ಗಳೂ ರಸ್ತೆಗೆ ಇಳಿಯುವ ಸಾಹಸ ತೋರಿಸಲಿಲ್ಲ. ವಿದ್ಯಾರ್ಥಿಗಳಿಲ್ಲದೆ ಶಾಲಾ ಕಾಲೇಜು­ಗಳಲ್ಲೂ ತರಗತಿಗಳು ನಡೆಯಲಿಲ್ಲ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆ­ದಿದ್ದರೂ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ಅಂಗಡಿಗಳು, ಹೋಟೆಲ್‌ ಮುಚ್ಚಿದ್ದವು. ಹೀಗಾಗಿ ದೂರದಿಂದ ಬಂದ ಪ್ರಯಾಣಿಕರು ಆಹಾರಕ್ಕಾಗಿ ಪರದಾಡುವಂ­ತಾಯಿತು.

ಪ್ರತಿಕೃತಿ ದಹನ:  ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜ­ನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT