ADVERTISEMENT

ಬಯಲುಸೀಮೆಯ ಬವಣೆ ತಪ್ಪಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST
ಕೋಲಾರದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ, ಎಂ.ವಿ.ರಾಜಶೇಖರನ್, ರೆಹಮಾನಖಾನ್, ವಿ.ಮುನಿಯಪ್ಪ ಮತ್ತಿತರರು ಇದ್ದಾರೆ.
ಕೋಲಾರದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ, ಎಂ.ವಿ.ರಾಜಶೇಖರನ್, ರೆಹಮಾನಖಾನ್, ವಿ.ಮುನಿಯಪ್ಪ ಮತ್ತಿತರರು ಇದ್ದಾರೆ.   

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದರೆ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಕನಸು ನನಸು ಮಾಡಲಾಗುವುದು ಎಂದು ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯ ಘಟಕದ ಮುಖಂಡರು ಭಾನುವಾರ ಭರವಸೆ ನೀಡಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಕೆ.ಜಿ.ಪರಮೇಶ್ವರ, ದಶಕದಿಂದ ನೆನೆಗುದಿಗೆ ಬಿದ್ದಿರುವ ಶಾಶ್ವತ ನೀರಾವರಿ ಯೋಜನೆಯೇ ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶ ಎಂದು ಘೋಷಿಸಿದರು.

ಎಷ್ಟೇ ಹಣ ಖರ್ಚಾದರೂ ಸರಿ ಕೇಂದ್ರ ಮತ್ತು ರಾಜ್ಯದ ಅನುದಾನ ಬಳಸಿ ಬಯಲು ಸೀಮೆಯ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು.  ನೀರಾವರಿಗಾಗಿ ಪ್ರತಿ ವರ್ಷ ರೂ 10 ಸಾವಿರ ಕೋಟಿ ಮೀಸಲಿಟ್ಟು ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ, ಬಯಲುಸೀಮೆಯ ಬವಣೆ ತಪ್ಪಿಸುತ್ತೇವೆ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಗಿಡವಾಗಿದ್ದ ಬಿಜೆಪಿಯನ್ನು ಮರವಾಗಿ ಬೆಳೆಸಿದ್ದು ಜೆಡಿಎಸ್ ಪಕ್ಷ. ಬಿಜೆಪಿ ಪಕ್ಷ ಕೋಮಾ ಸ್ಥಿತಿಯಲ್ಲೇ ಆಡಳಿತ ನಡೆಸಿತು ಎಂದು ಟೀಕಿಸಿದರು. ಸಮಾವೇಶಕ್ಕೂ ಮುನ್ನ ಬೆಂಗಳೂರಿನಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಮುಳಬಾಗಲಿನ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಶಾಸಕ ವಿ.ಮುನಿಯಪ್ಪ, ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ, ಎಂ.ವಿ.ರಾಜಶೇಖರನ್, ರೆಹಮಾನಖಾನ್, ರಾಣಿ ಸತೀಶ್, ವಿ.ಆರ್.ಸುದರ್ಶನ, ರಮೇಶ್‌ಕುಮಾರ್ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.