ADVERTISEMENT

ಬಳ್ಳಾರಿ: ರೂ. 41.47 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಬಳ್ಳಾರಿ: ವಿಧಾನಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತೀವ್ರ ತಪಾಸಣೆ ನಡೆಸುತ್ತಿರುವ ಪೊಲೀಸರು ಬಳ್ಳಾರಿ ನಗರ ಹಾಗೂ ತಾಲ್ಲೂಕಿನ ಗಡಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟುರೂ. 41.47 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೋತಿ ವೃತ್ತದಲ್ಲಿ ಬುಧವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರೂ.33.47 ಲಕ್ಷ ನಗದು ವಶಪಡಿಸಿಕೊಂಡ ಪೊಲೀಸರು, ಹೂವಿನ ಬಝಾರ್ ಪ್ರದೇಶದ ನಿವಾಸಿ ಅಶೋಕ ಕುಮಾರ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ನಗರದ ಕೌಲ್‌ಬಝಾರ್ ಪ್ರದೇಶದ ನಿವಾಸಿ, ಬಡ್ಡಿ ವ್ಯವಹಾರ (ಪಾನ್ ಬ್ರೋಕರ್) ನಡೆಸುವ ವಿ.ಗೋಪಾಲ್ ಎಂಬುವವರಿಗೆ ಸೇರಿದೆ ಎನ್ನಲಾದ ಈ ಹಣವನ್ನು, ಅವರ ಬಳಿ ಕೆಲಸ ಮಾಡುತ್ತಿರುವ ಅಶೋಕ ಕುಮಾರ್ ರಾತ್ರಿ ಸಾಗಿಸುತ್ತಿದ್ದರು.

ಗೋಪಾಲ್ ತಲೆ ಮರೆಸಿಕೊಂಡಿದ್ದು, ಶೋಧನೆ ನಡೆದಿದೆ. ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ಮುರುಗಣ್ಣವರ್, ಡಿಸಿಐಬಿ ಸಿಪಿಐ ಉಮೇಶ್ ನಾಯಕ್ ನೇತೃತ್ವದ ತಂಡ ದಾಳಿ ನಡೆಸಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ:  ಆಂಧ್ರಪ್ರದೇಶದ ಅನಂತಪುರದಿಂದ ಬರುತ್ತಿದ್ದ ಕಾರಿನಲ್ಲಿ  ದ್ರಾಕ್ಷಿ ಹಣ್ಣಿನ ಬುಟ್ಟಿಯೊಳಗೆ ಅಡಗಿಸಿಟ್ಟು ಸಾಗಿಸುತ್ತಿದ್ದ ರೂ. 8 ಲಕ್ಷ ನಗದನ್ನು ತಾಲ್ಲೂಕಿನ ಚೇಳ್ಳಗುರ್ಕಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ವಶಪಡಿಸಿಕೊಂಡು ಐವರನ್ನು ಬಂಧಿಸಲಾಗಿದೆ.

ಈ ಸಂಬಂಧ ಬಳ್ಳಾರಿ ನಿವಾಸಿಗಳಾದ ಚೇತನ್, ಹರೀಶ್, ಹೇಮಂತ್, ದೀಪಾರಾಮ್ ಹಾಗೂ ವಾಹನದ ಚಾಲಕ ರಾಜು ಎಂಬುವವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಹಣ ದೊರೆತಿದೆ.

ಆಟೊಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಲು ಅನಂತಪುರಕ್ಕೆ ತೆರಳ್ದ್ದಿದೆವು. ಆದರೆ ಯಾವ ವಸ್ತುಗಳನ್ನು ಖರೀದಿಸದೇ ಹಣದೊಂದಿಗೆ ವಾಪಸ್ ಬರುವಾಗ ಪೊಲೀಸರ ಕಣ್ತಪ್ಪಿಸಲು ದ್ರಾಕ್ಷಿ ಹಣ್ಣಿನ ಬುಟ್ಟಿಯಲ್ಲಿ ಹಣವನ್ನು ಇರಿಸಿದ್ದಾಗಿ ಬಂಧಿತರು ತಿಳಿಸಿದ್ದಾರೆ. ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ದೊರೆತಿಲ್ಲ ಎಂದು ಡಿವೈಎಸ್‌ಪಿ ರುದ್ರಮುನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.