ಧಾರವಾಡ: ಶುಕ್ರವಾರ ನಡೆದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಜೆಡಿಎಸ್ ಮುಖಂಡ ಇಸ್ಮಾಯಿಲ್ ತಮಾಟಗಾರ, ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ‘ಆರ್ಎಸ್ಎಸ್ ಏಜೆಂಟ್’ ಎಂದು ಶನಿವಾರ ಜರೆದಿದ್ದಾರೆ.
‘ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಲಿದೆ. ಆದರೂ, ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟ ಹೊರಟ್ಟಿ, ತಮ್ಮ ಪುತ್ರ ವಸಂತ ಅವರನ್ನು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಿಸುವ ಏಕೈಕ ಉದ್ದೇಶದಿಂದ ಏಕಪಕ್ಷೀಯವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ನಮ್ಮನ್ನು ಸೌಜನ್ಯಕ್ಕೂ ಸಂಪರ್ಕಿಸಿಲ್ಲ’ ಎಂದು ಟೀಕಿಸಿದರು.
‘ಶಿವು ಹಿರೇಮಠ ಅವರನ್ನು ಮೇಯರ್ ಮಾಡುವುದಾದರೆ ಜೆಡಿಎಸ್ ಬೆಂಬಲಿಸುತ್ತದೆ ಎಂದು ವಾರದ ಹಿಂದೆಯೇ ಹೊರಟ್ಟಿ ಬಿಜೆಪಿ ಮುಖಂಡರಿಗೆ ಆಶ್ವಾಸನೆ ನೀಡಿದ್ದರು. ಆ ಮೂಲಕ ನನ್ನ ಎದುರಾಳಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಮ್ಮ ಗತಿ ಏನು’ ಎಂದು ಪ್ರಶ್ನಿಸಿದರು.
‘ಪಾಲಿಕೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಬಗ್ಗೆ ಪಕ್ಷದ ಮುಖಂಡರಾದ ಪಿ.ಸಿ.ಗದ್ದಿಗೌಡರ, ಅಮೃತ ದೇಸಾಯಿ, ತಬ್ರೇಜ್ ಸಂಶಿ ಹಾಗೂ ನನ್ನ ಸಲಹೆಯನ್ನು ಹೊರಟ್ಟಿ ಕೇಳಿಲ್ಲ. ಈ ಬಗ್ಗೆ ಪ್ರಶ್ನಿಸಲು ಅವರ ಮನೆಗೆ ಹೋದರೆ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದರು.
‘ಸಾಬೀತುಮಾಡಿದರೆ ರಾಜೀನಾಮೆ’
ಇಸ್ಮಾಯಿಲ್ ತಮಾಟಗಾರ ಅವರ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಬಸವರಾಜ ಹೊರಟ್ಟಿ, ‘ಇಸ್ಮಾಯಿಲ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದೆ ಎಂಬುದನ್ನು ಅವರು ಕುರಾನ್ ಮುಟ್ಟಿ ಪ್ರಮಾಣ ಮಾಡಲಿ. ತಕ್ಷಣವೇ ನಾನು ಪರಿಷತ್ ಸದಸ್ಯತ್ವ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲೆಸೆದರು.
ಇಸ್ಮಾಯಿಲ್ ಮಾಡಿದ ಆರೋಪಗಳ ಬಗ್ಗೆ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ‘ನನಗೆ ಮುಸ್ಲಿಂ ಧರ್ಮದ ಬಗ್ಗೆ ಅಪಾರ ಗೌರವವಿದೆ. ಆದ್ದರಿಂದಲೇ ಆ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಮುಟ್ಟಿ ಅವರು ಪ್ರಮಾಣ ಮಾಡಲಿ. ನಾನು ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡುತ್ತೇನೆ. ಅವರು ಬೇಕಿದ್ದರೆ ನಿಮ್ಮ (ಮಾಧ್ಯಮದವರ) ಮುಂದೆಯೇ ಪ್ರಮಾಣ ಮಾಡಲಿ’ ಎಂದರು.
‘ಶಿವು ಹಿರೇಮಠ ಅವರನ್ನು ಬೆಂಬಲಿಸುವ ಬಗ್ಗೆ ನಾನು ಯಾವುದೇ ಒತ್ತಡವನ್ನು ಪಕ್ಷದ ಪಾಲಿಕೆ ಸದಸ್ಯರ ಮೇಲೆ ಹಾಕಿಲ್ಲ. ಬೇಕಿದ್ದರೆ ಎಲ್ಲ ಸದಸ್ಯರನ್ನು ಕರೆದುಕೊಂಡು ಧಾರವಾಡಕ್ಕೆ ಬರುತ್ತೇನೆ. ಅವರನ್ನೇ ಕೇಳಿ’ ಎಂದು ಹೇಳಿದರು. ‘ನನ್ನ ಮಗನನ್ನು ಗೆಲ್ಲಿಸುವ ತಾಕತ್ತು ನನಗಿದೆ. ಅದಕ್ಕೆ ಪಕ್ಷವನ್ನು ನಾನು ದುರುಪಯೋಗ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಅವರೊಂದಿಗೆ ಯಾವಾಗಲೂ ಕಾಣಿಸಿಕೊಳ್ಳುವ ಇಸ್ಮಾಯಿಲ್ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದಾರೆಯೇ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದು ಹೊರಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.