ADVERTISEMENT

‘ಬಸವ ವಿರೋಧಿಗಳಿಂದ ಬಸವಪೀಠ ನಿಷ್ಕ್ರಿಯ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ನಡೆದ ಕಾರ್ಯ ಕ್ರಮದಲ್ಲಿ ಡಾ. ವೀರಣ್ಣ ರಾಜೂರ ದಂಪತಿಯನ್ನು ಅಭಿನಂದಿಸಲಾಯಿತು. ಎಫ್‌.ಟಿ.ಹಳ್ಳಿಕೇರಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಗುರುಲಿಂಗ ಕಾಪಸೆ, ಮುರು ಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಡಾ. ಚೆನ್ನವೀರ ಕಣವಿ, ಡಾ. ಮಲ್ಲಿಕಾ ಘಂಟಿ, ಡಾ. ಹೇಮಾ ಪಟ್ಟಣಶೆಟ್ಟಿ, ಅರವಿಂದ ಜತ್ತಿ ಇದ್ದಾರೆ
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ನಡೆದ ಕಾರ್ಯ ಕ್ರಮದಲ್ಲಿ ಡಾ. ವೀರಣ್ಣ ರಾಜೂರ ದಂಪತಿಯನ್ನು ಅಭಿನಂದಿಸಲಾಯಿತು. ಎಫ್‌.ಟಿ.ಹಳ್ಳಿಕೇರಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಗುರುಲಿಂಗ ಕಾಪಸೆ, ಮುರು ಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಡಾ. ಚೆನ್ನವೀರ ಕಣವಿ, ಡಾ. ಮಲ್ಲಿಕಾ ಘಂಟಿ, ಡಾ. ಹೇಮಾ ಪಟ್ಟಣಶೆಟ್ಟಿ, ಅರವಿಂದ ಜತ್ತಿ ಇದ್ದಾರೆ   

ಧಾರವಾಡ: ‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಬಸವ ವಿರೋಧಿಗಳಿಂದ ಬಸವ ಪೀಠ ನಿಷ್ಕ್ರಿಯಗೊಂಡಿದ್ದು, ಅದನ್ನು ಮತ್ತೆ ಕ್ರಿಯಾಶೀಲಗೊಳಿಸುವ ಅಗತ್ಯವಿದೆ’ ಎಂದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ, ಗದುಗಿನ ತೋಂಟದಾರ್ಯ ಸಂಸ್ಥಾನಮಠ ಮತ್ತು ಡಾ.ವೀರಣ್ಣ ರಾಜೂರ ಅಭಿನಂದನಾ ಸಮಿತಿ ಆಯೋಜಿಸಿದ್ದ ಡಾ.ವೀರಣ್ಣ ರಾಜೂರ ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣ, ಪುಸ್ತಕಗಳ ಪ್ರದರ್ಶನ, ಅಭಿನಂದನ ಗ್ರಂಥ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಸವ ಪೀಠದ ಈ ಸ್ಥಿತಿಗೆ ಸಂಭ್ರಮಿಸುವ ಮಂದಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿದ್ದಾರೆ ಎಂಬುದೇ ಶೋಚನೀಯ ಸಂಗತಿ. ಬಸವ ಪೀಠದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಡಾ. ವೀರಣ್ಣ ರಾಜೂರ ಅವರಿಗೆ ಸಾಕಷ್ಟು ಜನ ಕಿರುಕುಳ ನೀಡಿದ್ದಾರೆ. ಇಂಥ ವಿಘ್ನ ಸಂತೋಷಿಗಳನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷೆ ವಿಧಿಸುವಂತಾಗಬೇಕು. ಬಸವ ಪೀಠಕ್ಕೆ ಉತ್ತಮರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಯಾರು ಏನೇ ವಿರೋಧ ಮಾಡಿದರೂ ಬಸವಣ್ಣ ಈ ಕಾಲದ ಬೇಡಿಕೆ ಹಾಗೂ ಬಯಕೆ. ವಚನಗಳನ್ನು ರಚಿಸಿದ ಬಸವಣ್ಣನನ್ನು ಪಂಚಾಚಾರ್ಯರು, ಕಾಶೀನಾಥ ಶಾಸ್ತ್ರಿಗಳು, ಬ್ರಾಹ್ಮಣರು ವಿರೋಧ ಮಾಡಿದರು. ಯಾರೇ ವಿರೋಧಿಸಿದರೂ ಬಸವಣ್ಣನವರ ತತ್ವ ಹಾಗೂ ಆದರ್ಶವನ್ನು ಇಂದು ಎಲ್ಲರೂ ಒಪ್ಪಿಕೊಂಡಿರುವುದೇ ಅಂತಿಮ ಸತ್ಯ’ ಎಂದು ಹೇಳಿದರು.

‘ಬಸವಣ್ಣನ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಇರಬೇಕು ಎಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರ ಸುತ್ತೋಲೆಯನ್ನೇ ಹೊರಡಿಸಿದೆ. ಹೀಗಿರುವಾಗ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಸವ ಪೀಠಕ್ಕೆ ಮರು ಚಾಲನೆ ನೀಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಮೇಲೆ ಒತ್ತಡ ತಂದು ಧಾರವಾಡ ಮಂದಿ ನೈತಿಕತೆ ಪ್ರದರ್ಶಿಸಬೇಕು. ಜತೆಗೆ ಸರ್ಕಾರದ ಮೇಲೂ ಒತ್ತಡ ಹೇರಬೇಕಾದ ಅಗತ್ಯವಿದೆ’ ಎಂದು ಸ್ವಾಮೀಜಿ ಹೇಳಿದರು.

ಡಾ. ಗುರುಲಿಂಗ ಕಾಪಸೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಡಾ. ವೀರಣ್ಣ ರಾಜೂರ ಅವರ ಐದು ಕೃತಿಗಳನ್ನು ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.