ADVERTISEMENT

ಬಾರ್ ಹುಡುಗಿಯರಿಗೆ ಸೀರೆ ನಿಷೇಧ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಬೆಂಗಳೂರು: ಬಾರ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೀರೆ ಉಡುವಂತಿಲ್ಲ. ಪೂರ್ತಿಯಾಗಿ ದೇಹ ಮುಚ್ಚುವ ವಸ್ತ್ರವನ್ನೇ ತೊಡಬೇಕು. ಡಿಸ್ಕೊಥೆಕ್‌ಗಳು ಮತ್ತು ಮಹಿಳೆಯರು ಕೆಲಸ ಮಾಡುವ ಬಾರ್‌ಗಳಲ್ಲಿ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾ ಅಳವಡಿಕೆ, ಪ್ರತಿ ಕ್ಷಣದ ಚಟುವಟಿಕೆಯನ್ನೂ ಸೆರೆ ಹಿಡಿಯುವುದು ಇನ್ನು ಕಡ್ಡಾಯ ಆಗಲಿದೆ.

ಡಿಸ್ಕೊಥೆಕ್‌ಗಳು ಮತ್ತು ಮಹಿಳೆಯರು ಕೆಲಸ ಮಾಡುವ ಬಾರ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ವಸ್ತ್ರ ಸಂಹಿತೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಿಗಿಗೊಳಿಸುವ ಸಂಬಂಧ ಇದರಲ್ಲಿ ಹಲವು ಹೊಸ ಅಂಶಗಳನ್ನು ಅಳವಡಿಸಲಾಗಿದೆ.

ಡಿಸ್ಕೋಥೆಕ್‌ಗಳಲ್ಲಿ ಗ್ರಾಹಕರಿಗೆ, ಸಂಗೀತ ಹಾಗೂ ನೃತ್ಯ ಪ್ರಿಯರಿಗೆ ಗಾಯನ, ಡಿಸ್ಕೊ  ಜಾಕಿಗಳಿಂದ ವಾದ್ಯಸಂಗೀತ ಸಹಿತ ಪ್ರದರ್ಶನ ಅಥವಾ ಒಬ್ಬ ಕಲಾವಿದರಿಂದ ಸಂಗೀತ ನೃತ್ಯಕ್ಕೆ ಅವಕಾಶ ಕಲ್ಪಿಸಬಹುದು. ಗ್ರಾಮಾಫೋನ್‌ಗಳು, ಫೋನೋಗ್ರಾಫ್‌ಗಳು, ರೇಡಿಯೊ, ರೇಡಿಯೊ  ಗ್ರಾಮಾಫೋನ್‌ಗಳು, ಟೇಪ್ ರೆಕಾರ್ಡರ್‌ಗಳು, ಸಿ.ಡಿ ಮತ್ತಿತರ ಎಲೆಕ್ಟ್ರಾನಿಕ್ ಸಂಗೀತ ಸಾಧನಗಳನ್ನು ಬಳಸಿಕೊಳ್ಳಬಹುದು. ಬ್ಯಾಂಡ್‌ಗಳು ಹಾಗೂ ಆರ್ಕೆಸ್ಟ್ರಾಗೆ ನಿರ್ಬಂಧ ವಿಧಿಸಲಾಗಿದೆ.
 

ಮಾರ್ಗಸೂಚಿಯಲ್ಲಿ ಏನಿದೆ?
* ಡಿಸ್ಕೊಥೆಕ್ ಪರಿಚಾರಕಿಯರಿಗೆ ವಸ್ತ್ರಸಂಹಿತೆ
* ಸಿಸಿಟಿವಿ ಚಿತ್ರೀಕರಣ ಕಡ್ಡಾಯ.  ಬ್ಯಾಂಡ್, ಆರ್ಕೆಸ್ಟ್ರಾ  ನಿಷಿದ್ಧ
* ಡಿಜೆ, ಮುದ್ರಿತ ಸಂಗೀತಕ್ಕಿಲ್ಲ ತಡೆ.  ನರ್ತನಕ್ಕೆ ಅವಕಾಶ ಇಲ್ಲ


ಡಿಸ್ಕೊಥೆಕ್ ಅಥವಾ ಮಹಿಳೆಯರು ಕೆಲಸ ಮಾಡುವ ಬಾರ್‌ಗಳನ್ನು ಆರಂಭಿಸಲು ಆಯಾ ಪ್ರದೇಶದ ಪರವಾನಗಿ ಪ್ರಾಧಿಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಅವರನ್ನು ಒಳಗೊಂಡ ಪರವಾನಗಿ ಪ್ರಾಧಿಕಾರ ಈ ಸಂಬಂಧ ಪರವಾನಗಿ ನೀಡುವ ಅಧಿಕಾರವನ್ನು ಹೊಂದಿರುತ್ತದೆ.

ಕಮಿಷನರೇಟ್ ವ್ಯಾಪ್ತಿಗೆ ಬರದ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಯೊಬ್ಬರೇ ಪರವಾನಗಿ ಪ್ರಾಧಿಕಾರ ಆಗಿರುತ್ತಾರೆ.ಮದ್ಯ ಸರಬರಾಜಿಗೆ ಅಧಿಕೃತ ಪರವಾನಗಿ ಪಡೆದ ರಿಫ್ರೆಷ್‌ಮೆಂಟ್ ರೂಮ್‌ಗಳು, ಈಟಿಂಗ್ ಹೌಸ್, ಕಾಫಿ ಹೌಸ್, ಬೋರ್ಡಿಂಗ್ ಹೌಸ್, ಲಾಡ್ಜಿಂಗ್ ಹೌಸ್, ಹೋಟೆಲ್‌ಗಳು ಮತ್ತು ಮದ್ಯದಂಗಡಿಗಳಲ್ಲಿ ಡಿಸ್ಕೊಥೆಕ್ ಅಥವಾ ಇತರೆ ಪ್ರದರ್ಶನ ಇಲ್ಲದಿದ್ದರೆ ಪ್ರಾಧಿಕಾರದಿಂದ ಹೊಸದಾಗಿ ಪರವಾನಗಿ ಪಡೆಯಬೇಕಿಲ್ಲ.

ಸಾರ್ವಜನಿಕ ಮನರಂಜನಾ ಸ್ಥಳದ ವ್ಯಾಖ್ಯೆಯಲ್ಲಿ ಯಕ್ಷಗಾನ ಬಯಲಾಟ, ಭರತನಾಟ್ಯ, ಜಾನಪದ ಪ್ರದರ್ಶನ, ಸಂಗೀತ ಉತ್ಸವಗಳನ್ನು ತರಲಾಗಿದ್ದು, ಇವುಗಳ ಆಯೋಜನೆಗೆ ಪ್ರಾಧಿಕಾರದ ಪರವಾನಗಿ ಅಗತ್ಯ ಇಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಿಯಮ: ಡಿಸ್ಕೊಥೆಕ್ ಅಥವಾ ಅದಕ್ಕೆ ಸಮನಾದ ಚಟುವಟಿಕೆಯುಳ್ಳ ಸಾರ್ವಜನಿಕ ಮನರಂಜನಾ ಸ್ಥಳ ಆರಂಭಿಸಲು ಅನುಮತಿ ಕೋರುವವರು ಅರ್ಜಿಯ ಜೊತೆ ಸ್ಥಳೀಯ ನಗರಾಡಳಿತ ನೀಡುವ ವ್ಯಾಪಾರ ಪರವಾನಗಿ, ಅಬಕಾರಿ ಇಲಾಖೆಯ ಮದ್ಯದಂಗಡಿ ಪರವಾನಗಿ, ಸ್ಥಳದ ಒಡೆತನ ಅಥವಾ ಗುತ್ತಿಗೆ ಕರಾರು ಪತ್ರಗಳನ್ನು ಸಲ್ಲಿಸಬೇಕು.

ADVERTISEMENT

ಪರವಾನಗಿ ಪ್ರಾಧಿಕಾರವು ಅರ್ಜಿದಾರರ ಮನವಿ ಕುರಿತು ಕನ್ನಡ ಭಾಷೆಯ ಎರಡು ಪ್ರಮುಖ ಪತ್ರಿಕೆಗಳಲ್ಲಿ ಈ ವಿಷಯವನ್ನು ಪ್ರಕಟಿಸಬೇಕು. ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಬೇಕು. ಸಲಹೆ ಅಥವಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಪರವಾನಗಿ ನೀಡುವ ಅಥವಾ ನಿರಾಕರಿಸುವ ತೀರ್ಮಾನ ತೆಗೆದುಕೊಳ್ಳಬಹುದು.

ಪರವಾನಗಿ ನೀಡುವ ಅಥವಾ ನಿರಾಕರಿಸುವಾಗ ಸಾರ್ವಜನಿಕ ಹಿತಾಸಕ್ತಿ, ಅರ್ಜಿದಾರನ ಹಿನ್ನೆಲೆ, ಸಂಬಂಧಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೆ ಇರುವ ಸ್ಥಳಾವಕಾಶ, ಸಾರ್ವಜನಿಕ ಮನರಂಜನಾ ಸ್ಥಳ ಆರಂಭದಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಆಗಬಹುದಾದ ಪರಿಣಾಮ ಮತ್ತಿತರ ಅಂಶಗಳನ್ನು ಪರಿಗಣಿಸಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯೊಳಗೆ ಪರವಾನಗಿ ನೀಡುವಂತಿಲ್ಲ.

ಅಶ್ಲೀಲ ದೃಶ್ಯಗಳು, ಚಿತ್ರಗಳು, ವೀಡಿಯೊ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಡಿಸ್ಕೊಥೆಕ್‌ಗಳಲ್ಲಿ ಕೆಲಸ ಮಾಡುವ ಪುರುಷರು ಅಥವಾ ಮಹಿಳೆಯರು ಗ್ರಾಹಕರನ್ನು ಪ್ರಚೋದಿಸುವ ರೀತಿಯಲ್ಲಿ ವರ್ತಿಸುವಂತಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಒಂದು ವರ್ಷದ ಅವಧಿ ಮೀರದಂತೆ ಪರವಾನಗಿ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವಸ್ತ್ರ ಸಂಹಿತೆ: ಬಾರ್‌ಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವ ಮಹಿಳೆಯರ ವಯಸ್ಸು 21ಕ್ಕಿಂತ ಮೇಲಿರಬೇಕು. ಮಹಿಳೆಯರು ಪಾದದವರೆಗೆ ಮುಚ್ಚುವ ಪ್ಯಾಂಟ್ ಹಾಗೂ ತುಂಬು ತೋಳಿನ ಅಂಗಿ ಅಥವಾ ಟಿ ಷರ್ಟ್ (ಕೋಟು ಧರಿಸಲೂಬಹುದು, ಧರಿಸದೇ ಇರಬಹುದು), ಅಥವಾ ಸಲ್ವಾರ್ ಕಮೀಜ್ ಮತ್ತು ದುಪಟ್ಟಾ ಧರಿಸಿರಬೇಕು. ಹಿಂದೆ ಸೀರೆ ಉಡಲು ಅವಕಾಶ ಇತ್ತು. ಈ ಬಾರಿ ಅದನ್ನು ತೆಗೆದು ಹಾಕಲಾಗಿದೆ. ಅಶ್ಲೀಲವಾದ ರೀತಿಯಲ್ಲಿ ದೇಹ ಪ್ರದರ್ಶಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ನಿರ್ಬಂಧ ವಿಧಿಸಲಾಗಿದೆ.

ಬಾರ್‌ಗಳ ಮಾಲೀಕರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅನುಮತಿ  ಕೋರುವಾಗಲೇ ಸಮವಸ್ತ್ರದ ಮಾದರಿಯನ್ನೂ ಸಲ್ಲಿಸಬೇಕು. ಪ್ರಾಧಿಕಾರವು ಸಮ್ಮತಿ ಸೂಚಿಸುವ ಮಾದರಿಯ ಸಮವಸ್ತ್ರವನ್ನೇ ಮಹಿಳೆಯರು ಕೆಲಸದ ಅವಧಿಯಲ್ಲಿ ಧರಿಸುವುದು ಕಡ್ಡಾಯ. ಈ ಮಹಿಳೆಯರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತು ಮತ್ತು ವಯಸ್ಸು ದೃಢೀಕರಿಸುವ ದಾಖಲೆ, ವಿಳಾಸದ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆ ಮತ್ತು ಕಾರ್ಮಿಕ ಇಲಾಖೆಗೆ ಸಲ್ಲಿಸಬೇಕು. ಅನುಮತಿ ಪಡೆದ ದಿನದಿಂದ 30 ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ನೌಕರರ ಗುರುತು ದೃಢೀಕರಣ ದಾಖಲೆಗಳಿಗೆ ಆಯಾ ಬಾರ್ ಮಾಲೀಕರೇ ಹೊಣೆಗಾರರಾಗಿರುತ್ತಾರೆ. ಯಾವುದೇ ಬಾರ್‌ಗಳಲ್ಲಿ ಪುರುಷರು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ನೃತ್ಯ ಅಥವಾ ಪ್ರದರ್ಶನ ನೀಡುವುದಕ್ಕಾಗಿ ನೇಮಿಸಿಕೊಳ್ಳುವಂತಿಲ್ಲ. ಮಹಿಳೆಯರು ಕೆಲಸ ತೊರೆದಾಗ ಅಥವಾ ಹೊಸಬರನ್ನು ನೇಮಿಸಿಕೊಂಡಾಗ ಪರವಾನಗಿ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯ. ಒಂದು ಕಡೆ ಕೆಲಸಕ್ಕೆ ನೇಮಿಸಿಕೊಂಡ ಮಹಿಳೆಯರನ್ನು ಮತ್ತೊಂದು ಕಡೆಗೆ ನಿಯೋಜಿಸಲು ಅವಕಾಶ ಇಲ್ಲ.

ಮಹಿಳೆಯರು ಮನೆಯಿಂದ ಕೆಲಸಕ್ಕೆ ಬರುವಾಗ ಮತ್ತು ಕೆಲಸ ಮುಗಿಸಿ ಮನೆಗೆ ತೆರಳುವಾಗ ಸೂಕ್ತ ರಕ್ಷಣೆಯೊಂದಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಬೇಕು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ (ವಿಶಾಖಾ ಪ್ರಕರಣ) ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಈ ಸ್ಥಳಗಳಿಗೂ ಅನ್ವಯಿಸುತ್ತದೆ. ಮಹಿಳೆಯರ ಮೇಲೆ ನೋಟು ತೂರುವುದು, ಕೆಟ್ಟ ರೀತಿಯಲ್ಲಿ ಸಂಜ್ಞೆ ಮಾಡುವುದು, ಅಶ್ಲೀಲ ಪದಗಳನ್ನು ಪ್ರಯೋಗಿಸಲು ಅವಕಾಶ ನೀಡುವಂತಿಲ್ಲ. ನೌಕರರ ಭಾವಚಿತ್ರ ಅಥವಾ ವಿಡಿಯೊ ತೆಗೆಯಲು ಗ್ರಾಹಕರಿಗೆ ಅವಕಾಶ ನೀಡಬಾರದು ಎಂಬ ನಿರ್ಬಂಧ ಮಾರ್ಗಸೂಚಿಯಲ್ಲಿದೆ.

ನಿರಂತರ ಕಣ್ಗಾವಲು: ಮಹಿಳೆಯರು ಕೆಲಸ ಮಾಡುವ ಬಾರ್, ಡಿಸ್ಕೊಥೆಕ್‌ಗಳ ಮೊಗಸಾಲೆ, ಪ್ರವೇಶ ದ್ವಾರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕನಿಷ್ಠ 24 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾ ಅಳವಡಿಸಬೇಕು. ಅವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಯಾವುದೇ ಕ್ಯಾಮೆರಾ ಕೆಟ್ಟುಹೋದಲ್ಲಿ ತಕ್ಷಣವೇ ಬದಲಿಸುವುದಕ್ಕಾಗಿ ಒಂದು ಹೆಚ್ಚುವರಿ ಕ್ಯಾಮೆರಾ ಇಟ್ಟುಕೊಂಡಿರಬೇಕು.

ಪೊಲೀಸರು ಬಯಸಿದ ಎಲ್ಲಾ ಸಂದರ್ಭಗಳಲ್ಲಿ ಸಿಸಿಟಿವಿ ಚಿತ್ರೀಕರಣದ ವಿವರಗಳನ್ನು ಒದಗಿಸಬೇಕು. ಕನಿಷ್ಠ ಮೂರು ತಿಂಗಳ ಚಿತ್ರೀಕರಣದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದಾಖಲೆಗಳನ್ನು ತಿರುಚಿದಲ್ಲಿ ಮಾಲೀಕರೇ ಹೊಣೆಗಾರರಾಗುತ್ತಾರೆ. ನೋಂದಾಯಿತ ಖಾಸಗಿ ಭದ್ರತಾ ಸಂಸ್ಥೆಯ ಸಿಬ್ಬಂದಿಯನ್ನೇ ಭದ್ರತಾ ಕೆಲಸಕ್ಕೆ ನೇಮಿಸಿಕೊಳ್ಳಬೇಕು.

ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಗ್ರಾಹಕರಾಗಿ ಬಂದಲ್ಲಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ಹೊರತಾಗಿ ಯಾರೂ ಆಯುಧ ಮತ್ತು ಶಸ್ತ್ರಾಸ್ತಗಳನ್ನು ಹಿಡಿದು ಬರುವಂತಿಲ್ಲ ಎಂಬ ನಿರ್ಬಂಧಗಳನ್ನೂ ವಿಧಿಸಲಾಗಿದೆ. ವಾಹನ ನಿಲುಗಡೆ ಸ್ಥಳಾವಕಾಶ, ಆಸನಗಳ ವ್ಯವಸ್ಥೆ, ಸ್ವಚ್ಛತೆ, ಕೆಲಸದ ವೇಳೆ ಮತ್ತಿತರ ಅಂಶಗಳಿಗೆ ಸಂಬಂಧಿಸಿದಂತೆ ಹಿಂದೆ ಇದ್ದ ಮಾದರಿಯಲ್ಲೇ ಬಿಗಿ ನಿರ್ಬಂಧಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.