ADVERTISEMENT

ಬಿಎಸ್‌ವೈ, ಈಶ್ವರಪ್ಪ ಆಸ್ತಿ ಘೋಷಣೆಯತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಆಸ್ತಿ ಘೋಷಣೆ ಬಗ್ಗೆ ಈಗ ಸಾರ್ವಜನಿಕರಲ್ಲಿ ಕುತೂಹಲ ಗರಿಗೆದರಿದೆ. ಶಿಕಾರಿಪುರದಿಂದ ಯಡಿಯೂರಪ್ಪ, ಶಿವಮೊಗ್ಗ ನಗರದಿಂದ ಈಶ್ವರಪ್ಪ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸುವ ಪ್ರಮಾಣಪತ್ರದಲ್ಲಿನ ಆಸ್ತಿ ವಿವರಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ 8 ದಿನದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೂ ಮುಂಚೆ ಅವರು ಉಪ ಮುಖ್ಯಮಂತ್ರಿ. ಅಂದು ಚುನಾವಣೆಗೆ ಸ್ಪರ್ಧಿಸುವಾಗ ನಾಮಪತ್ರದ ಜತೆ ಲಗತ್ತಿಸಿದ ಪ್ರಮಾಣಪತ್ರದಲ್ಲಿ ಅವರು ಘೋಷಿಸಿದ ಆಸ್ತಿಯ ಒಟ್ಟು ಮೌಲ್ಯ ಕೇವಲ ರೂ 1.82 ಕೋಟಿ. ಅಂದು ಕೆ.ಎಸ್. ಈಶ್ವರಪ್ಪ ಮಾಜಿ ಸಚಿವರು. ಅವರು ಆವಾಗ ರೂ 3.47 ಕೋಟಿ ಆಸ್ತಿ ಒಡೆಯ.

ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಈಶ್ವರಪ್ಪ ವಿದ್ಯುತ್ ಸಚಿವರಾದರು. ತದನಂತರ, ಕೆಲಕಾಲ ಪಕ್ಷದ ಅಧ್ಯಕ್ಷರಾದರು. ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇವರಿಬ್ಬರ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿರಬಹುದು ಎಂದು ಜನ ಲೆಕ್ಕ ಹಾಕುತ್ತಿದ್ದಾರೆ.

ಐದು ವರ್ಷದಲ್ಲಿ ರಾಜ್ಯದಲ್ಲಿ `ಅಭಿವೃದ್ಧಿ'ಯ ಹೊಳೆ ಹರಿದಿದೆ. ಶಿವಮೊಗ್ಗದ ತುಂಗಾ ನದಿಯಲ್ಲೂ ಸಾಕಷ್ಟು ನೀರು ಹರಿದಿದೆ.

ಯಡಿಯೂರಪ್ಪ-ಈಶ್ವರಪ್ಪ ಕೇವಲ ರಾಜಕಾರಣದ ಸ್ನೇಹಿತರಲ್ಲ; ವ್ಯವಹಾರದಲ್ಲೂ ಸಮಪಾಲು ಪಡೆದವರು. ಇವರಿಬ್ಬರ ಕುಟುಂಬ ಒಡೆತನದ ಗಗನಚುಂಬಿ ಕಟ್ಟಡಗಳು ಬಿ.ಎಚ್. ರಸ್ತೆಯ ಇಕ್ಕೆಲಗಳಲ್ಲಿ ಎದ್ದು ನಿಂತವು. ಅಲ್ಲಲ್ಲಿ ಫಲವತ್ತಾದ ಭೂಮಿ, ತೋಟಗಳು ಹೆಚ್ಚಾದವು. ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಈ ಮಧ್ಯೆ ಯಡಿಯೂರಪ್ಪ ಜೈಲಿಗೂ ಹೋಗಿ ಬಂದರು. ಈಶ್ವರಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದು, ಮನೆಯಲ್ಲಿ ನೋಟು ಎಣಿಸುವ ಯಂತ್ರವೂ ಸಿಕ್ಕಿತು.

ಇಷ್ಟೆಲ್ಲಾ ಆಸ್ತಿ ಸಂಬಂಧಿತ ವಿದ್ಯಮಾನಗಳು ಐದು ವರ್ಷಗಳಲ್ಲಿ ನಡೆದಿರುವಾಗ ಇವರಿಬ್ಬರ ಈಗಿನ ಆಸ್ತಿ ಎಷ್ಟು? ಅದರ ಮೌಲ್ಯ ಎಷ್ಟು? ಮಾಡಿಕೊಂಡ ಸಾಲವೆಷ್ಟು? ಎಂಬಿತ್ಯಾದಿ ಪ್ರಶ್ನೆಗಳು ಪ್ರತಿ ಮತದಾರನ ಮನಸ್ಸಿನಲ್ಲೂ ಮೂಡಿವೆ. ಯಡಿಯೂರಪ್ಪ ಏಪ್ರಿಲ್ 15ರಂದು, ಈಶ್ವರಪ್ಪ ಏಪ್ರಿಲ್ 10ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದ್ದು, ಅಂದು ಸಲ್ಲಿಸುವ ಪ್ರಮಾಣಪತ್ರದಲ್ಲಿ ಬಯಲಾಗುವ `ಆಸ್ತಿ ಪವಾಡ'ಕ್ಕೆ ಕ್ಷಣಗಣನೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.