ADVERTISEMENT

ಬಿಎಸ್‌ವೈ ಟೀಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಬೆಂಗಳೂರು/ಹುಬ್ಬಳ್ಳಿ/ಉಡುಪಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ವಿರುದ್ಧ ಧಿಕ್ಕಾರ ಕೂಗಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ತನೆಗೆ ಕಮಲ ಪಾಳೆಯ ತಿರುಗೇಟು ನೀಡಲಾರಂಭಿಸಿದೆ. ರಾಜ್ಯಸಭಾ ಸದಸ್ಯ ಎಂ.ವೆಂಕಯ್ಯ ನಾಯ್ಡು ನೇರವಾಗಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು, `ಯಡಿಯೂರಪ್ಪ, ನಾನು ಸೇರಿದಂತೆ ಪಕ್ಷದ ಹಲವು ಮುಖಂಡರು ಅಡ್ವಾಣಿ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದಿದ್ದೇವೆ.

ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಪರಿಹರಿಸಿಕೊಳ್ಳಲು ಹಲವು ವೇದಿಕೆಗಳಿವೆ. ರಾಷ್ಟ್ರೀಯ ರಾಜಕಾರಣದಲ್ಲಿ ಅಡ್ವಾಣಿ ಅವರಿಗೆ ಅತ್ಯಂತ ಗೌರವವಿದೆ. ಅಂತಹ ವ್ಯಕ್ತಿಯ ವಿರುದ್ಧ ಸುಮ್ಮನೆ ಆರೋಪ ಮಾಡುವ ಮೊದಲು ಯಡಿಯೂರಪ್ಪ ಅವರು ತುಸು ಯೋಚಿಸಬೇಕಿತ್ತು~ ಎಂದರು.

`ಅಡ್ವಾಣಿ ಅವರು ದೇಶದ ಉಪ ಪ್ರಧಾನಿ ಹುದ್ದೆಯನ್ನು ನಿರ್ವಹಿಸಿದವರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಗೌರವ ಮತ್ತು ಚಾರಿತ್ರ್ಯವನ್ನು ಕಾಯ್ದುಕೊಂಡು ಬಂದವರು. ಅವರ ವಿರುದ್ಧ ಯಡಿಯೂರಪ್ಪ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಲಘುವಾದ ರೀತಿಯಲ್ಲಿ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ~ ಎಂದು ಹೇಳಿದರು.

`ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಅಶೋಕ ಹೋಟೆಲ್ ಮಾರಾಟಕ್ಕೆ ಕಾರಣವಾಗಿದ್ದರು ಎಂಬುದಾಗಿ ಯಡಿಯೂರಪ್ಪ ಮಾಡಿರುವ ಆರೋಪ ಕೂಡ ಸತ್ಯಕ್ಕೆ ದೂರವಾದುದು. ಅಶೋಕ ಹೋಟೆಲ್ ಮಾರಾಟದಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಪಾತ್ರವೇ ಇರಲಿಲ್ಲ. ಬಂಡವಾಳ ಹಿಂತೆಗೆತ ಸಚಿವಾಲಯವು ಅಶೋಕ ಹೋಟೆಲ್ ಮಾರಾಟ ಮಾಡುವ ತೀರ್ಮಾನವನ್ನು ಕೈಗೊಂಡಿತ್ತು~ ಎಂದು ಯಡಿಯೂರಪ್ಪ ಅವರ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಯಡಿಯೂರಪ್ಪ ಅವರಿಗೆ ಬಿಜೆಪಿ ಎಲ್ಲವನ್ನೂ ನೀಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಹೀಗೆ ಹಲವು ಸ್ಥಾನಮಾನಗಳನ್ನು ಅವರು ಪಕ್ಷದಿಂದಲೇ ಪಡೆದಿದ್ದಾರೆ. ಈ ಹಂತದಲ್ಲಿ ಬಿಜೆಪಿಯಲ್ಲಿ ಮುಂದುವರಿಯುವುದು ಅಥವಾ ಪಕ್ಷ ಬಿಡುವುದು ಅವರಿಗೆ ಸೇರಿದ ವಿಷಯ. ಯಾರು ಪಕ್ಷದಲ್ಲಿ ಇರಲಿ, ಇಲ್ಲದಿರಲಿ ಕರ್ನಾಟಕದ ಜನರು ಬಿಜೆಪಿಯ ಜೊತೆ ಇರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿಯ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಪರವಾಗಿ ಜನರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.ಚುಚ್ಚಿದ ಶೆಟ್ಟರ್: ಹುಬ್ಬಳ್ಳಿಯಲ್ಲಿ ಡಾ.ಡಿ.ಎಸ್.ಕರ್ಕಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಮತ್ತು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶೆಟ್ಟರ್, ಯಡಿಯೂರಪ್ಪ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

`ಎಷ್ಟು ಕೀಳುಮಟ್ಟದಲ್ಲಿ ನಾವು ಮಾತನಾಡುತ್ತೇವೋ ಆ ಧ್ವನಿ ಅಷ್ಟು ದೊಡ್ಡದೆನಿಸುತ್ತದೆ. ಆ ರೀತಿ ಮಾತನಾಡಿದವರೇ ದೊಡ್ಡ ರಾಜಕಾರಣಿ ಅನಿಸಿಕೊಳ್ಳುತ್ತಿದ್ದಾರೆ~ ಎಂದು ಚುಚ್ಚಿದರು.`ನಮ್ಮಂಥವರಿಗಂತೂ ಆ ಭಾಷೆಯನ್ನು ಮಾತನಾಡಲು ಸಾಧ್ಯವೇ ಇಲ್ಲ. ಅಂತಹ ವ್ಯಕ್ತಿತ್ವ ಬರಲೂ ಸಾಧ್ಯವಿಲ್ಲ. ಕೆಳಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅದರಿಂದ ಹೊರಬಂದು ಸಾಂಸ್ಕೃತಿಕವಾಗಿ ಮಾತನಾಡುವುದನ್ನು ಮತ್ತು ಸೌಜನ್ಯದ ಎಲ್ಲೆಯೊಳಗೆ ಟೀಕೆ ಮಾಡುವುದನ್ನು ಬೆಳೆಸಿಕೊಳ್ಳಬೇಕಾಗಿದೆ~ ಎಂದರು.

`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ವಹಿಸಲಿರುವ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಜೊತೆ ಗುರುತಿಸಿಕೊಳ್ಳುವ ಬಿಜೆಪಿ ಶಾಸಕರು-ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ~ ಎಂದು ಶೆಟ್ಟರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

`ಬಿಜೆಪಿ ಶಿಸ್ತಿನ ಪಕ್ಷ. ಯಾವುದೇ ಗೊಂದಲಗಳು ಉದ್ಭವಿಸಿದರೂ ಅದನ್ನು ಹೈಕಮಾಂಡ್ ಪರಿಹರಿಸಲಿದೆ. ಕೆಜೆಪಿ ಜೊತೆ ಗುರುತಿಕೊಂಡು ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ವಿವೇಚನೆಗೆ ಬಿಡಲಾಗಿದೆ~ ಎಂದು ಹೇಳಿದರು.

`ಸರ್ಕಾರ ಪೂರ್ಣಾವಧಿ ಪೂರೈಸಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ ಶೆಟ್ಟರ್, `ಯಡಿಯೂರಪ್ಪ ಅವರ ಹೇಳಿಕೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದರು.ಸಮಾವೇಶವೇ ಅನುಮಾನ: ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಬೆಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಸಭೆಯಲ್ಲಿ, ಯಡಿಯೂರಪ್ಪ ಅವರ ಬೆಂಬಲಿಗರೆಂದು ಗುರುತಿಸಿಕೊಂಡವರಲ್ಲಿ ನಾಲ್ಕೈದು ಮಂದಿಯನ್ನು ಬಿಟ್ಟು, ಬಹುತೇಕರು ಪಾಲ್ಗೊಂಡಿದ್ದರು.

ಈಗಿನ ವಾತಾವರಣ ನೋಡಿದರೆ ಡಿಸೆಂಬರ್ 9ರಂದು ಹಾವೇರಿಯಲ್ಲಿ ಕೆಜೆಪಿ ಸಮಾವೇಶ ನಡೆಯುವುದೇ ಅನುಮಾನ~ ಎಂದು ಅಭಿಪ್ರಾಯಪಟ್ಟರು. `ಕೆಜೆಪಿಯಿಂದ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮವೂ ಆಗದು. ಬಿಜೆಪಿ ತೊರೆಯದಂತೆ ಯಡಿಯೂರಪ್ಪನವರ ನಿಷ್ಠರೇ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಅಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾತ್ರ ಉಳಿಯುತ್ತಾರೆ~ ಎಂದು ವ್ಯಂಗ್ಯವಾಡಿದರು.

ಬಿಜೆಪಿಗೆ ಹೆಚ್ಚು ನಷ್ಟ
ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರ ನಿಧನದಿಂದ ಬಿಜೆಪಿಗೆ ಹೆಚ್ಚು ನಷ್ಟವಾಗಿದೆ ಎಂದು ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿದರು.`ಶಿವಸೇನೆಯು ದೀರ್ಘ ಕಾಲದಿಂದ ಬಿಜೆಪಿಗೆ ವಿಶ್ವಾಸಾರ್ಹ ಮಿತ್ರ ಪಕ್ಷವಾಗಿತ್ತು. ಈಗ ಅದರ ನಾಯಕ ಠಾಕ್ರೆ ಅವರು ನಿಧನ ರಾಗಿರುವುದರಿಂದ ಬಿಜೆಪಿಗೂ ನಷ್ಟವಾಗಿದೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.