ADVERTISEMENT

ಬಿಎಸ್‌ವೈ ಪುತ್ರಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಶಿವಮೊಗ್ಗ:  ಪತ್ರಕರ್ತರ ಕೋಟಾದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರಿ ಎಸ್.ವೈ. ಅರುಣಾದೇವಿ ಕರ್ನಾಟಕ ಗೃಹಮಂಡಳಿ ನಿವೇಶನ ಪಡೆದ ಪ್ರಕರಣ ಕುರಿತಂತೆ ಮಂಗಳವಾರ ನಗರದ ವಕೀಲರೊಬ್ಬರು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಅರ್ಜಿ ಸ್ವೀಕರಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಹಾಲಕ್ಷ್ಮೀ ನೇರಳೆ, ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು, ಮಾರ್ಚ್ 14ರ ಒಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ.

ಅರುಣಾದೇವಿ ಅವರು ಶಿವಮೊಗ್ಗದ ಕಲ್ಲಹಳ್ಳಿ ಕಾಶೀಪುರ ಕೆಎಚ್‌ಬಿ ಕಾಲೊನಿಯಲ್ಲಿ 121.50 ಚ.ಮೀ. ಅಳತೆಯ ಎರಡು ಮತ್ತು 135 ಚ.ಮೀ. ಅಳತೆಯ ಎರಡು ನಿವೇಶನಗಳನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿವಶಂಕರ, ಕೃಷ್ಣ, ಸಂದೇಶಗೌಡ ಹಾಗೂ ಮಂಜುನಾಥ್ ಅವರ ಹೆಸರಿನಲ್ಲಿ ಪತ್ರಕರ್ತರ ಕೋಟಾದಡಿ ಅರ್ಜಿ ಸಲ್ಲಿಸಿ, ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ವಕೀಲ ಬಿ. ವಿನೋದ್ ತಮ್ಮ ವಿವರವಾದ ದೂರಿನಲ್ಲಿ ಆರೋಪಿಸಿದ್ದಾರೆ.

ನಿವೇಶನಕ್ಕೆ ಸಂಬಂಧಿಸಿದಂತೆ 2007ರ ಜೂನ್ 27ರಂದು ಕ್ರಯಪತ್ರವಾಗಿದೆ. ನಂತರ ಈ ಎಲ್ಲ ನಿವೇಶನಗಳನ್ನು 2010 ಮಾರ್ಚ್ 31ರಂದು ಅರುಣಾದೇವಿ ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ. ಅಲ್ಲದೇ, ಈ ನಾಲ್ವರು ಪತ್ರಕರ್ತರೇ ಅಲ್ಲ. ಇವರು ಪತ್ರಕರ್ತರು ಎಂದು ಆಗ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕೆಎಚ್‌ಬಿಗೆ ಶಿಫಾರಸು ಪತ್ರ ಬರೆದಿದ್ದಾರೆ ಎಂದು ಬಿ. ವಿನೋದ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಒಂದನೇ ಆರೋಪಿಯನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎರಡನೇ ಆರೋಪಿಯನ್ನಾಗಿ ಅವರ ಪುತ್ರಿ ಎಸ್.ವೈ. ಅರುಣಾದೇವಿ ಹಾಗೂ ಮೂರನೇ ಆರೋಪಿಯನ್ನಾಗಿ ಆಗ ಕೆಎಚ್‌ಬಿ ಆಯುಕ್ತರಾಗಿದ್ದ ದ್ಯಾಬೇರಿ ಅವರನ್ನು ಹೆಸರಿಸಲಾಗಿದೆ ಎಂದು ವಿನೋದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.