ADVERTISEMENT

ಬಿಎಸ್‌ವೈ: ವಿಚಾರಣೆ ನಾಳೆಗೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಬೆಂಗಳೂರು:  ಅನಾರೋಗ್ಯದ ಸಮಸ್ಯೆಗಳನ್ನು ಮುಂದಿಟ್ಟು ಹೈಕೋರ್ಟ್‌ನಲ್ಲಿ ಜಾಮೀನು ಕೋರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ (ಅ.20) ಮುಂದೂಡಿದೆ.

ಮುಖ್ಯ ಅರ್ಜಿಯು ಇತ್ಯರ್ಥಗೊಳ್ಳುವವರೆಗೆ ಸದ್ಯ ಮಧ್ಯಂತರ ಜಾಮೀನು ನೀಡುವಂತೆ ಮಂಗಳವಾರ ಅವರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಆದರೆ ಇದು ಅನಾರೋಗ್ಯದ ಆಧಾರದ ಮೇಲೆ ಅಲ್ಲ ಎಂದು ವಿಚಾರಣೆ ವೇಳೆ ಅವರು ಸ್ಪಷ್ಟಪಡಿಸಿದರು.

ಲೋಕಾಯುಕ್ತ ವಿಶೇಷ ಕೋರ್ಟ್ ಕಳೆದ ಶನಿವಾರ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರು ವಿಶೇಷ     ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸುತ್ತಿದ್ದಾರೆ.

ವಕೀಲರ ನಡುವೆ ವಾಗ್ಯುದ್ಧ: ಜಾಮೀನು ಅರ್ಜಿ ಕುರಿತಾದ ವಿಚಾರಣೆ ವೇಳೆ ರವಿ ಬಿ. ನಾಯಕ್ ಹಾಗೂ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ಅವರ ನಡುವೆ ವಾಗ್ಯುದ್ಧ ನಡೆಯಿತು.

ಬೆಳಿಗ್ಗೆ ವಿಚಾರಣೆ ಆರಂಭಗೊಳ್ಳುತ್ತಿದ್ದಂತೆ, ಜಾಮೀನು ನೀಡುವಂತೆ ನಾಯಕ್ ಅವರು ನ್ಯಾಯಮೂರ್ತಿಗಳನ್ನು ಕೋರಿದರು. ಅದಕ್ಕೆ ಹನುಮಂತರಾಯ ಆಕ್ಷೇಪ ವ್ಯಕ್ತಪಡಿಸಿದರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕನಿಷ್ಠ ವಾರದ ಕಾಲಾವಕಾಶ ಬೇಕು.
 
ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಲೋಕಾಯುಕ್ತ ವಿಶೇಷ ಕೋರ್ಟ್ ಹೊರಡಿಸಿರುವ ಆದೇಶವು 200ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಓದಬೇಕಿದೆ ಎಂದರು.

ಆಗ ನಾಯಕ್ ಅವರು, `ಮುಖ್ಯ ಅರ್ಜಿಯ ವಿಚಾರಣೆ ನಿಧಾನ ನಡೆಯಲಿ. ಈಗ ತುರ್ತಾಗಿ ಮಧ್ಯಂತರ ಜಾಮೀನು ನೀಡಬೇಕು~ ಎಂದರು. ಅದಕ್ಕೆ ಹನುಮಂತರಾಯ ಒಪ್ಪಲಿಲ್ಲ.  ತುರ್ತಾಗಿ ಮಧ್ಯಂತರ ಜಾಮೀನು ನೀಡಲೇಬಾರದು. ತಾವು ಕೇಳಿದಷ್ಟು ಕಾಲಾವಕಾಶ ನೀಡಬೇಕು ಎಂದು ವಾದಿಸಿದರು.

ಈ ರೀತಿ ಕಾಲಾವಕಾಶ ಕೇಳುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ನಾಯಕ್ ಮಾತಿನ ಚಾಟಿ ಬೀಸಿದರು.ಅನಾರೋಗ್ಯದ ನೆಪ: ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹನುಮಂತರಾಯ ಅವರು, `ಯಡಿಯೂರಪ್ಪನವರು ಚಿಕ್ಕಪುಟ್ಟ ಕಾಯಿಲೆಗಳನ್ನು ಮುಂದಿಟ್ಟುಕೊಂಡು ಜಾಮೀನು ಕೇಳುತ್ತಿದ್ದಾರೆ.

ಅನಾರೋಗ್ಯದ ಕಾರಣವು ನೆಪ ಮಾತ್ರ. `ವಿಪರೀತ ಸಕ್ಕರೆ ಕಾಯಿಲೆ ಇದ್ದು, ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದೇನೆ. ವಿಪರೀತ ಜ್ವರದಿಂದ ನರಳುತ್ತಿದ್ದೇನೆ. ವೈದ್ಯರ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ~ ಇತ್ಯಾದಿ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇವೆಲ್ಲ ಕಾಯಿಲೆಗಳು ಎಲ್ಲರಿಗೂ ಮಾಮೂಲು. ಇದನ್ನೇ ತೀವ್ರ ಅನಾರೋಗ್ಯ ಎಂದು ಹೇಳಿ ಜಾಮೀನು ಕೇಳುವುದು ಎಷ್ಟು ಸರಿ~ ಎಂದು ಪ್ರತಿಚಾಟಿ ಬೀಸಿದರು.

ಆಗ ನಾಯಕ್ ಅವರು, `ಈಗ ನಾವು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೇಳುತ್ತಿದ್ದೇವೆ ಎಂದು ಹೇಳಿದವರು ಯಾರು, ಇದು ನಿಮ್ಮ ಕಲ್ಪನೆ ಮಾತ್ರ.  ಆನಾರೋಗ್ಯದ ಆಧಾರದ ಮೇಲೆ ಜಾಮೀನು ಕೇಳುತ್ತಿಲ್ಲ~ ಎಂದರು.ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.