ADVERTISEMENT

ಬಿಎಸ್‌ವೈ ವಿರುದ್ಧದ 4ನೇ ದೂರು- 30ರಂದು ಆದೇಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ನಾಲ್ಕನೇ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ, ಬೇಡವೇ ಎಂಬುದರ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಇದೇ 30ರಂದು ಆದೇಶ ಪ್ರಕಟಿಸಲಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಸಿ, ದೂರುದಾರರ ಪರ ವಕೀಲರ ವಾದ ಆಲಿಸಿದರು. ಸಿರಾಜಿನ್ ಬಾಷಾ ಪರ ವಾದ ಮಂಡಿಸಿದ ವಕೀಲ ನಿತಿನ್, `ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 202ರ ಪ್ರಕಾರ ನ್ಯಾಯಾಲಯ ಈ ದೂರಿನಲ್ಲಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಬಹುದು. ನೇರವಾಗಿ ಆರೋಪಿಗಳಿಗೆ ಸಮನ್ಸ್ ಕೂಡ ಜಾರಿ ಮಾಡಿ ವಿಚಾರಣೆ ಆರಂಭಿಸಬಹುದು~ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ದೀರ್ಘಕಾಲ ಅವರ ವಾದ ಆಲಿಸಿದ ನ್ಯಾಯಾಧೀಶರು, ಈ ದೂರನ್ನು ವಿಚಾರಣೆಗೆ ಅಂಗೀಕರಿಸಬೇಕೇ, ಬೇಡವೇ ಎಂಬುದರ ಬಗ್ಗೆ ಜನವರಿ 30ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿದರು.

ADVERTISEMENT

ಬಾಷಾ ಸಲ್ಲಿಸಿರುವ ನಾಲ್ಕನೇ ದೂರಿನ ಆರೋಪಿಗಳ ಪಟ್ಟಿಯಿಂದ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಉದ್ಯಮಿ ಪ್ರವೀಣ್‌ಚಂದ್ರ ಅವರ ಹೆಸರುಗಳನ್ನು ಕೈಬಿಡಲಾಗಿದೆ. ಈ ಇಬ್ಬರ ವಿರುದ್ಧ ಮೂರನೇ ದೂರಿನಲ್ಲಿ ಮಾಡಿರುವ ಆರೋಪಗಳು ನಾಲ್ಕನೇ ದೂರಿನಲ್ಲೂ ಪುನರಾವರ್ತನೆ ಆಗಿದ್ದವು. ಈ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡುವಂತೆ ಬಾಷಾ ತಿಂಗಳ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.

ಮೊದಲ ದೂರಿನ ವಿಚಾರಣೆ: ಬಾಷಾ ಸಲ್ಲಿಸಿರುವ ಮೊದಲನೇ ದೂರಿನ ಬಗ್ಗೆಯೂ ಶುಕ್ರವಾರ ವಿಚಾರಣೆ ನಡೆಯಿತು. ಈ ದೂರಿನಲ್ಲಿ ಮಾಡಿರುವ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ತಕ್ಷಣವೇ ವಿಚಾರಣೆ ಆರಂಭಿಸಬಹುದು ಎಂದು ಬಾಷಾ ಪರ ವಕೀಲರು ವಾದಿಸಿದರು. ಈ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಅಂದು ದೂರುದಾರರ ವಕೀಲರ ವಾದ ಮಂಡನೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.