ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಸಹಚರ ಮೆಹಫೂಜ್ ಅಲಿಖಾನ್‌ನನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇಬ್ಬರನ್ನೂ ಬಳ್ಳಾರಿಗೆ ಕರೆದೊಯ್ಯುವ ಸಾಧ್ಯತೆ ಇದೆ.
ಇಲ್ಲಿನ ಸಿಬಿಐ ಕಚೇರಿಯಲ್ಲಿ ಬಿಗಿ ಭದ್ರತೆಯಲ್ಲಿ ಇಬ್ಬರೂ ಆರೋಪಿಗಳನ್ನು ಇರಿಸಲಾಗಿದೆ. ಸಿಬಿಐ ಡಿಐಜಿ ಆರ್.ಹಿತೇಂದ್ರ ನೇತೃತ್ವದ ತಂಡ ಆರೋಪಿಗಳಿಂದ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ. ಶನಿವಾರ ಬೆಳಿಗ್ಗೆಯೇ ರೆಡ್ಡಿ ಮತ್ತು ಅಲಿಖಾನ್‌ನನ್ನು ಪ್ರಶ್ನಿಸಲು ಆರಂಭಿಸಿದ ಸಿಬಿಐ ಅಧಿಕಾರಿಗಳು, ಸಂಜೆಯವರೆಗೂ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ.
ಎಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 1ರಂದು ಸಿಬಿಐ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ನಂತರ ಹಲವೆಡೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ಐದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಅಧಿಕಾರಿಗಳು, ಅಪಾರ ಪ್ರಮಾಣದ ಮಾಹಿತಿ ಕಲೆಹಾಕಿದ್ದಾರೆ.
ಈಗ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ತಂಡ, ಹಿಂದೆ ಸಂಗ್ರಹಿಸಿರುವ ಮಾಹಿತಿ, ದಾಖಲೆಗಳ ಕುರಿತು ಅವರಿಂದ ಉತ್ತರ ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.
ವಕೀಲ ಹಾಜರಿ: ಆರೋಪಿಗಳ ಪರ ವಕೀಲರ ಹಾಜರಿಯಲ್ಲೇ ಇಬ್ಬರನ್ನೂ ಪ್ರಶ್ನಿಸಲಾಗುತ್ತಿದೆ. ಶನಿವಾರ ರೆಡ್ಡಿ ಪರ ವಕೀಲರೊಬ್ಬರು ವಿಚಾರಣೆ ವೇಳೆ ಹಾಜರಿದ್ದರು. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳು, ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳ ಬಗ್ಗೆ ವಕೀಲರ ಉಪಸ್ಥಿತಿಯಲ್ಲೇ ಪ್ರಶ್ನಿಸಲಾಗಿದೆ. ಸಿಬಿಐ ಪೊಲೀಸರು ಮತ್ತು ಆರೋಪಿ ಪರ ವಕೀಲರ ಹೊರತಾಗಿ ಯಾರೂ ಅಲ್ಲಿರಲಿಲ್ಲ.
ಇಬ್ಬರೂ ಆರೋಪಿಗಳನ್ನು ಒಂದೆರಡು ದಿನಗಳಲ್ಲಿ ಬಳ್ಳಾರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಎಎಂಸಿ ಗಣಿ ಪ್ರದೇಶ, ಬೇರೆ ಗಣಿಗಳಿಂದ ಎಎಂಸಿ ಹೆಸರಿನಲ್ಲಿ ಅದಿರು ಸಾಗಿಸಿರುವ ಪ್ರದೇಶ, ರೆಡ್ಡಿ ನಿವಾಸ ಸೇರಿದಂತೆ ಕೆಲವೆಡೆ ಕರೆದೊಯ್ದು ತನಿಖೆಗೆ ಒಳಪಡಿಸಲು ಸಿಬಿಐ ನಿರ್ಧರಿಸಿದೆ. ಆದರೆ, ಆರೋಪಿಗಳನ್ನು ಬಳ್ಳಾರಿಗೆ ಕರೆದೊಯ್ಯುವ ವಿಷಯಕ್ಕೆ ಸಂಬಂಧಿಸಿದಂತೆ ಗೋಪ್ಯತೆ ಕಾಯ್ದುಕೊಂಡಿದೆ.
ಬಿಗಿ ಭದ್ರತೆ: ಜನಾರ್ದನ ರೆಡ್ಡಿ ಅವರನ್ನು ಇರಿಸಿರುವ ಹಿನ್ನೆಲೆಯಲ್ಲಿ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಕಚೇರಿಯ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸಿಬಿಐ ಕಚೇರಿ ಆವರಣ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸಿಬಿಐ ಅಧಿಕಾರಿಗಳು, ತನಿಖಾ ಸಂಸ್ಥೆ ಮತ್ತು ಆರೋಪಿಗಳ ಪರ ವಕೀಲರ ಹೊರತಾಗಿ ಯಾರಿಗೂ ಅತ್ತ ಸುಳಿಯಲು ಅವಕಾಶವಿಲ್ಲ.
ಕಾಲಕಾಲಕ್ಕೆ ಭದ್ರತೆಯ ತಪಾಸಣೆ ನಡೆಸಲಾಗುತ್ತಿದೆ. ಶನಿವಾರ ಬೆಳಿಗ್ಗೆಯೇ ಶ್ವಾನದಳ ಮತ್ತು ಬಾಂಬ್ ಪತ್ತೆ ದಳದ ಸಿಬ್ಬಂದಿ ಸಿಬಿಐ ಕಚೇರಿಗೆ ಭೇಟಿ ನೀಡಿ ಮೂಲೆಮೂಲೆಯಲ್ಲೂ ಪರಿಶೀಲನೆ ನಡೆಸಿದರು. ರಾಜ್ಯ ಮೀಸಲು ಪೊಲೀಸ್ ಪಡೆಯ ತುಕಡಿಯೊಂದನ್ನು ಅಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.