ADVERTISEMENT

ಬಿಜೆಪಿಯಲ್ಲಿ ಬಿಎಸ್‌ಆರ್‌ ವಿಲೀನ

ನರೇಂದ್ರ ಮೋದಿಗಾಗಿ ಬೇಷರತ್‌ ಬೆಂಬಲ: ಶ್ರೀರಾಮಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ಬಳ್ಳಾರಿ: ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿಯೊಂದಿಗೆ ಬೇಷರತ್‌ ಆಗಿ ವಿಲೀನಗೊಳಿಸಲು ನಿರ್ಧರಿಸ­ಲಾಗಿದೆ ಎಂದು ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ತಿಳಿಸಿದರು.

ನಗರದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆಯ ಮೇರೆಗೆ ಮತ್ತೆ ಬಿಜೆಪಿ ಸೇರುತ್ತಿರು­ವುದಾಗಿ ಹೇಳಿದರು.

ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರದ ಅವಧಿಯ ನಂತರದ 10 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆಯಂತಹ ಜನವಿರೋಧಿ ನೀತಿ ಅನುಸರಿ­ಸಿರುವುದರಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನಕ್ಕೆ ತರುವುದಕ್ಕಾಗಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸುಷ್ಮಾ ಸ್ವರಾಜ್‌, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ ಮತ್ತಿತರ ರಾಷ್ಟ್ರೀಯ ಮುಖಂಡರು, ಜಗದೀಶ ಶೆಟ್ಟರ್, ಪ್ರಹ್ಲಾದ್‌ ಜೋಶಿ ಮತ್ತಿತರ ರಾಜ್ಯ ಮುಖಂಡರು ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ದಿನಗಳಲ್ಲಿ  ವಿಲೀನ ಪ್ರಕ್ರಿಯೆ ಪೂರ್ಣ­ವಾಗಲಿದೆ ಎಂದರು.

‘ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಸೇರಿರುವುದರಿಂದ ಸ್ವಾಭಿ­ಮಾನಕ್ಕೆ ಧಕ್ಕೆಯಾಗಿತ್ತು. ಅದಕ್ಕಾಗಿ ನಾನು ಬಿಜೆಪಿ ತೊರೆದು, ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದೆ. ಆದರೆ, ದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸ್ವಾಭಿಮಾನ  ಲೆಕ್ಕಿಸದೆ ಬಿಜೆಪಿಗೆ ಮರು ಸೇರ್ಪಡೆ ಆಗುತ್ತಿದ್ದೇನೆ’ ಎಂದು ಅವರು ಒತ್ತಿ ಹೇಳಿದರು.

‘ನಾನೇ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ವಿಲೀನ ಪ್ರಕ್ರಿಯೆಗೆ ಮನವಿ ಮಾಡಿದ್ದೆ. ಜ್ಯೋತಿಷಿಗಳು ಹೇಳಿದಂತೆ ಕೇಳುವ ನಾನು ಅವರ ಸಲಹೆಯ ಮೇರೆಗೆ ಆ ಪಕ್ಷವನ್ನು ಸೇರುತ್ತಿದ್ದೇನೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.