ADVERTISEMENT

ಬಿಜೆಪಿ ಬಿಕ್ಕಟ್ಟು ಉಲ್ಬಣ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಬಗೆಹರಿಸುವ ಪ್ರಯತ್ನಗಳಿಗೆ ಫಲ ದೊರೆತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರ ಬಣ ಸೋಮವಾರ ಪುನಃ ಸಭೆ ಸೇರಿ ತಮ್ಮ ಪಟ್ಟು ಬಿಗಿಗೊಳಿಸುವ ಸನ್ನಾಹ ನಡೆಸಿದೆ. ತಮ್ಮ ನಾಯಕನಿಗೆ ರಾಜೀನಾಮೆ ಪತ್ರ ನೀಡಿರುವ ಎಂಟೂ ಸಚಿವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ನಡೆಸಿದ ಸಂಧಾನ ಸಭೆಗೆ ಗೈರುಹಾಜರಾಗುವ ಮೂಲಕ ಪಕ್ಷಕ್ಕೇ ಸೆಡ್ಡು ಹೊಡೆದಿದ್ದಾರೆ.

ನಾಯಕತ್ವ ಬದಲಾವಣೆಗೆ ಯಡಿಯೂರಪ್ಪ ಬಣ ಪಟ್ಟು ಹಿಡಿದಿದೆ. `ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಬದಲಾವಣೆ ಮಾಡದಿದ್ದರೆ ಪಕ್ಷದಲ್ಲಿ ಉಳಿಯಲಾರೆವು~ ಎನ್ನುವ ಸಂದೇಶವನ್ನು ಈ ಬಣ ಪಕ್ಷದ ವರಿಷ್ಠರಿಗೆ ರವಾನಿಸಿದೆ. ಈ ಸಂದೇಶದೊಂದಿಗೆ ರಾಜೀನಾಮೆ ಪತ್ರಗಳನ್ನು ಹೊತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಸಂಜೆ ದೆಹಲಿಗೆ ದೌಡಾಯಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಜೊತೆ ಶೋಭಾ ಅವರು ಮಾತುಕತೆ ನಡೆಸಲಿದ್ದಾರೆ.

ಯಡಿಯೂರಪ್ಪ ಅವರ ರೇಸ್ ಕೋರ್ಸ್ ರಸ್ತೆಯ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿತ್ತು. ಸರಣಿ ಸಭೆಗಳನ್ನು ನಡೆಸಿ, ಮುಂದಿನ ನಡೆ ಬಗ್ಗೆ ಆಪ್ತರ ಜತೆ ಮಾಜಿ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಮಧ್ಯಾಹ್ನದ ನಂತರ ರಹಸ್ಯ ಸ್ಥಳದಲ್ಲಿ ಸಭೆ ನಡೆಸಿದರು.

ವಿದೇಶ ಪ್ರವಾಸದಿಂದ ವಾಪಸಾದ ಈಶ್ವರಪ್ಪ ಬಿಕ್ಕಟ್ಟು ಪರಿಹರಿಸುವ ಪ್ರಯತ್ನ ನಡೆಸಿದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಅವರ ರೇಸ್ ಕೋರ್ಸ್ ರಸ್ತೆ ಮನೆಗೆ ತೆರಳಿದರೂ ಅದು ಫಲ ನೀಡಲಿಲ್ಲ. ಈಶ್ವರಪ್ಪ ಅವರು ತೆರಳುವ ವೇಳೆಗೆ ಯಡಿಯೂರಪ್ಪ ತಮ್ಮ ನಿವಾಸದಿಂದ ಹೊರ ನಡೆದಿದ್ದರು. ಸಂಜೆ ಡಾಲರ್ಸ್‌ ಕಾಲೊನಿ ನಿವಾಸದಲ್ಲಿ ಯಡಿಯೂರಪ್ಪ ಜತೆ ಈಶ್ವರಪ್ಪ ಮಾತುಕತೆ ನಡೆಸಿದರು.

ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಆರು ಸಚಿವರ ವಿರುದ್ಧ ಗಡ್ಕರಿ ಅವರಿಗೆ ಬರೆದ ಪತ್ರದ ಬಗ್ಗೆ ಆ ಸಂದರ್ಭದಲ್ಲಿ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ನಾಯಕತ್ವ ಬದಲಾವಣೆ ಆಗಲೇಬೇಕು~ ಎಂದು ಹೇಳಿದ್ದಾರೆ. ಸದಾನಂದ ಗೌಡ ಮತ್ತು ಹಿರಿಯ ಮುಖಂಡ ಅನಂತಕುಮಾರ್ ವಿರುದ್ಧ ಕೆಂಡಕಾರಿದ್ದಾರೆ.

`ಸಿಬಿಐ ತನಿಖೆ ನನ್ನ ಕೊರಳಿಗೆ ಸುತ್ತಿಕೊಳ್ಳಲು ಇವರೂ ಕಾರಣ. ಹೀಗಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿದ ನಂತರವೇ ಸಂಧಾನ. ಇಲ್ಲದಿದ್ದರೆ, ನಿಮ್ಮ ದಾರಿ ನಿಮಗೆ~ ಎಂದು ಸ್ಪಷ್ಟಪಡಿಸಿದರು ಎಂದು ಗೊತ್ತಾಗಿದೆ.

ಇದಕ್ಕೂ ಮುನ್ನ ಸಚಿವ ಜಗದೀಶ ಶೆಟ್ಟರ್ ಮನೆಯಲ್ಲಿ ಸಭೆ ನಡೆಸಿ, ರಾಜೀನಾಮೆ ನೀಡಿರುವ ಎಂಟು ಮಂದಿ ಸಚಿವರ ಮನವೊಲಿಸಲು ನಿರ್ಧರಿಸಲಾಯಿತು. ಪಕ್ಷದ ಕಚೇರಿಯಲ್ಲಿ ಸಂಜೆ 5.30ಕ್ಕೆ ಸಭೆ ನಿಗದಿಪಡಿಸಲಾಯಿತು. ಆದರೆ, ಈಶ್ವರಪ್ಪ ಕರೆದಿದ್ದ ಸಭೆಗೆ ಎಂಟೂ ಸಚಿವರು ಬೆನ್ನು ತೋರಿಸಿದ ಕಾರಣ ಬಿಕ್ಕಟ್ಟು ಮುಂದುವರಿದಿದೆ.

ಈ ಸಭೆಯಲ್ಲಿ ಸಚಿವರಾದ ಆರ್.ಅಶೋಕ, ಶೆಟ್ಟರ್, ಗೋವಿಂದ ಕಾರಜೋಳ, ಎಸ್.ಸುರೇಶಕುಮಾರ್, ಸಿ.ಪಿ.ಯೋಗೇಶ್ವರ್ ಮಾತ್ರ ಭಾಗವಹಿಸಿದ್ದರು. `ಬರಬೇಕಾದವರೇ ಸಭೆಗೆ ಬಂದಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಯಿತು~ ಎಂದು ಸಚಿವರೊಬ್ಬರು ಹೇಳಿದರು.

ಬಲವೃದ್ಧಿಗೆ ಒತ್ತು: ಎಂಟು ಮಂದಿ ಸಚಿವರು ಮತ್ತು ಕೆಲ ಶಾಸಕರಿಂದ ರಾಜೀನಾಮೆ ಪತ್ರಗಳನ್ನು ಪಡೆದಿರುವ ಯಡಿಯೂರಪ್ಪ ಅವರು ತಮ್ಮ ಬಣದ ಶಾಸಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುವ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ. ಅವರ ಆಪ್ತ ಸಿಬ್ಬಂದಿ, ತಮ್ಮ ಸಂಪರ್ಕದಲ್ಲಿದ್ದ ಶಾಸಕರ ಜತೆ ದೂರವಾಣಿ ಮೂಲಕ ಮಾತನಾಡಿ, ಸೋಮವಾರ ಬೆಳಿಗ್ಗೆ ಉಪಾಹಾರ ಕೂಟಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. 40ಕ್ಕೂ ಹೆಚ್ಚು  ಶಾಸಕರು ಆಹ್ವಾನಕ್ಕೆ ತಲೆದೂಗಿದ್ದಾರೆ ಎಂದು ಗೊತ್ತಾಗಿದೆ.

`ಊಪಾಹಾರ ಕೂಟಕ್ಕೆ ಎಷ್ಟು ಮಂದಿ ಹಾಜರಾಗುತ್ತಾರೆ? ಅವರಲ್ಲಿ ರಾಜೀನಾಮೆಗೆ ಎಷ್ಟು ಮಂದಿ ಸಿದ್ಧರಾಗುತ್ತಾರೆ ಎನ್ನುವುದರ ಮೇಲೆ ಸದಾನಂದ ಗೌಡರ ಸರ್ಕಾರದ ಭವಿಷ್ಯ ನಿಂತಿದೆ. ಒಂದು ವೇಳೆ 40ಕ್ಕೂ ಹೆಚ್ಚು ಶಾಸಕರು `ಮಾಡು ಇಲ್ಲವೇ ಮಡಿ~ ಎಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾದರೆ ಯಡಿಯೂರಪ್ಪ ಬಣ ಮೇಲುಗೈ ಪಡೆಯಲಿದೆ~ ಎಂದು ಅವರ ಆಪ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಆದರೆ, ಉಪಾಹಾರ ಕೂಟಕ್ಕೆ ಬರುವವರೆಲ್ಲರೂ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆ ಯಡಿಯೂರಪ್ಪ ಬಣದ ಹಿರಿಯ ಸಚಿವರನ್ನೇ ಕಾಡುತ್ತಿದೆ. ವಿಧಾನಸಭೆ ಅವಧಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬಾಕಿ ಇರುವಾಗ ಚುನಾವಣೆ ಯಾರೊಬ್ಬರಿಗೂ ಇಷ್ಟ ಇಲ್ಲ. ಹೀಗಾಗಿ ರಾಜೀನಾಮೆಗೆ ಬಹಳಷ್ಟು ಶಾಸಕರು ಹಿಂದೇಟು ಹಾಕುವ ಸಾಧ್ಯತೆ ಇದೆ. ಒತ್ತಡಕ್ಕೆ ಮಣಿದು ಬರುವ ಶಾಸಕರು ನಿರ್ಣಾಯಕ ಹಂತದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಬಣದ ಬಲ ಅವಲಂಬಿಸಿದೆ. ಯಡಿಯೂರಪ್ಪ ನಿವಾಸದಿಂದ ದೂರವಾಣಿ ಕರೆ ಹೋದ ತಕ್ಷಣ ಅನೇಕ ಶಾಸಕರು ಪಕ್ಷದಲ್ಲಿನ ಇತರ ಮುಖಂಡರ ಜತೆ ಮಾತುಕತೆ ನಡೆಸಿ, `ಬಿಕ್ಕಟ್ಟು ಬಗೆಹರಿಸಲು ಏನಾದರೂ ಮಾಡಿ. ಚುನಾವಣೆ ಮಾತ್ರ ಬೇಡ~ ಎಂದು ಗೋಗರೆದಿದ್ದಾರೆ.

`ಸದಾನಂದ ಗೌಡರು ನನ್ನನ್ನು ಮುಗಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಬಿಡುವುದಿಲ್ಲ. ಅವರನ್ನು ಪದಚ್ಯುತಗೊಳಿಸಬೇಕು. ನಾನು ಸೂಚಿಸುವವರೇ ಮುಖ್ಯಮಂತ್ರಿ ಆಗಬೇಕು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ ಅನೇಕರು ಮುಖ್ಯಮಂತ್ರಿಗಳಾಗಿ ಮುಂದುವರಿದ ನಿದರ್ಶನಗಳಿವೆ. ನನ್ನನ್ನು ಮಾತ್ರ ಬಲಿಪಶು ಮಾಡುವುದು ಏಕೆ~ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ನಡುವಣ ಮಾತಿನ ಸಮರ ಪಕ್ಷದ ಮುಖಂಡರಿಗೆ ದೊಡ್ಡ ತಲೆ ನೋವಾಗಿದೆ. `ಮುಖ್ಯಮಂತ್ರಿಯವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ~ ಎಂದು ಪಕ್ಷದ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ಪಕ್ಷದ ವರಿಷ್ಠರು ತಮ್ಮ ಜತೆ ಸೌಜನ್ಯಕ್ಕೂ ಮಾತನಾಡಿಲ್ಲ ಎಂದು ಯಡಿಯೂರಪ್ಪ ವರಿಷ್ಠರ ವಿರುದ್ಧವೂ ಗುಡುಗಿದ್ದಾರೆ.

ಅಸ್ತಿತ್ವದ ಪ್ರಶ್ನೆ: ಯಡಿಯೂರಪ್ಪ ಅವರ ಈ ನಡೆಯನ್ನು ಒತ್ತಡ ತಂತ್ರ ಎಂದು ವಿರೋಧಿ ಬಣ ವಿಶ್ಲೇಷಿಸುತ್ತಿದೆ. ಸಂಪುಟ ವಿಸ್ತರಣೆಯಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಸಲುವಾಗಿ ಈ ತಂತ್ರ ಹೆಣೆದಿದ್ದಾರೆ. ಇದರಲ್ಲಿ ಯಡಿಯೂರಪ್ಪ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ ಎಂಬುದು ಅವರ ಅಭಿಮತ.

ಖಾಸಗಿ ಕಾರು ಬಳಕೆ: ರಾಜೀನಾಮೆ ಕೊಟ್ಟಿರುವ ಎಂಟು ಮಂದಿ ಸಚಿವರ ಪೈಕಿ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ವಿ.ಸೋಮಣ್ಣ, ಉಮೇಶ ವಿ.ಕತ್ತಿ ಅವರು ಸರ್ಕಾರಿ ಕಾರುಗಳನ್ನು ಬಿಟ್ಟು, ಖಾಸಗಿ ವಾಹನಗಳಲ್ಲಿಯೇ ಭಾನುವಾರ ಓಡಾಟ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.