ADVERTISEMENT

ಬಿಜೆಪಿ ಸಂಬಂಧ ಕಡಿದುಕೊಂಡ ಲಿಂಬಿಕಾಯಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಬೆಂಗಳೂರು: ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಬಿಜೆಪಿಯ ಮೋಹನ್ ಲಿಂಬಿಕಾಯಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ಸೋಮವಾರ ನೀಡಿದ ರಾಜೀನಾಮೆಯನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಂಗೀಕರಿಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಲಿಂಬಿಕಾಯಿ ಅವರ ಸದಸ್ಯತ್ವದ ಅವಧಿ 2014ರ ಜೂನ್ 30ರವರೆಗೂ ಇತ್ತು. 2008ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ಅವರನ್ನು ಸೋಲಿಸಿ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದರು.

`ಪರಿಷತ್ ಸದಸ್ಯತ್ವ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿ, ಕೆಜೆಪಿಗೆ ಸೇರಿದ್ದೇನೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ' ಎಂದು ಲಿಂಬಿಕಾಯಿ ಸುದ್ದಿಗಾರರಿಗೆ ತಿಳಿಸಿದರು.

`ವಕೀಲನಾಗಿ ಕಕ್ಷಿದಾರರಿಗೆ ದೊರಕಿಸಿಕೊಟ್ಟ ನ್ಯಾಯವನ್ನು, ಶಾಸಕನಾಗಿ ಕ್ಷೇತ್ರಕ್ಕೆ ದೊರಕಿಸಿಕೊಡಲು ಆಗಲಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಸ್ನೇಹ ಇದೆ. ಆದರೆ, ರಾಜಕೀಯ ಬೇರೆ. ಜೀವನ ಬೇರೆ'  ಎಂದರು.

ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಲಿಂಬಿಕಾಯಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಜ್ಜನ ರಾಜೀನಾಮೆ?: ಪರಿಷತ್‌ನ ಮತ್ತೊಬ್ಬ ಸದಸ್ಯ ಶಿವರಾಜ ಸಜ್ಜನ ಅವರು ಇದೇ 4ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸಭಾಪತಿ ಶಂಕರಮೂರ್ತಿ ಭೇಟಿಗೆ ಕಾಲಾವಕಾಶ ಕೇಳಿದ್ದಾರೆ. ಅವರು ಮಂಗಳವಾರ ಮತ್ತು ಬುಧವಾರ ಕೇಂದ್ರಸ್ಥಾನದಲ್ಲಿ ಇರುವುದಿಲ್ಲ. ಹೀಗಾಗಿ 4ರಂದು ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಆರು ಜನ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸುವಂತೆ ಕೋರಿ ಬಿಜೆಪಿಯು ಈಗಾಗಲೇ ಸಭಾಪತಿಗೆ ದೂರು ನೀಡಿದೆ. ಈ ಆರು ಮಂದಿಯಲ್ಲಿ ಲಿಂಬಿಕಾಯಿ, ಸಜ್ಜನ ಅವರೂ ಸೇರಿದ್ದಾರೆ.

ಲಿಂಬಿಕಾಯಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ನೀಡಿರುವ ದೂರು ಬಗ್ಗೆ ವಿಚಾರಣೆ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಜ್ಜನ ಅವರಿಗೆ ನಾಲ್ಕರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅದಕ್ಕೂ ಮೊದಲೇ ರಾಜೀನಾಮೆ ನೀಡಿದರೆ ವಿಚಾರಣೆ ನಡೆಸುವ ಅಗತ್ಯವೇ ಇಲ್ಲ ಎಂದು ಶಂಕರಮೂರ್ತಿ ತಿಳಿಸಿದರು.
ಭಾರತಿ ಶೆಟ್ಟಿ, ಬಿ.ಜೆ.ಪುಟ್ಟಸ್ವಾಮಿ, ಡಾ.ಮುಮ್ತಾಜ್ ಅಲಿ ಖಾನ್ ಹಾಗೂ ಎಂ.ಡಿ.ಲಕ್ಷ್ಮಿನಾರಾಯಣ ಅವರು ಈಗಾಗಲೇ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಹತ್ತು ದಿನದಲ್ಲಿ ಮೌಖಿಕ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದರು.

`ನಾವು ಬಿಜೆಪಿ ಬಿಟ್ಟಿಲ್ಲ. ಬಿಜೆಪಿಯೊಂದಿಗೇ ಇದ್ದೇವೆ. ಪಕ್ಷ ಹೇಳಿದ ಹಾಗೆ ನಡೆದುಕೊಂಡಿದ್ದೇವೆ. ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ನಮ್ಮ ವಿರುದ್ಧ ದಾಖಲಾಗಿರುವ ಅರ್ಜಿಯನ್ನು ತಿರಸ್ಕರಿಸಿ' ಎಂದು ನೋಟಿಸ್‌ಗೆ ನೀಡಿರುವ ಉತ್ತರದಲ್ಲಿ ಇವರು ತಿಳಿಸಿದ್ದಾರೆ ಎಂದು ಸಭಾಪತಿ ವಿವರಿಸಿದರು.

ಸ್ವಾಭಿಮಾನಕ್ಕೆ ಧಕ್ಕೆ

`ಬಿಜೆಪಿಯಲ್ಲಿನ ಒಳಜಗಳ, ಮನಸ್ತಾಪ ನೋಡಿ ಮನಸ್ಸಿಗೆ ಬೇಸರವಾಗಿದೆ. ಸ್ವಾಭಿಮಾನ ಉಳ್ಳವರು ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ. ಆಡಳಿತಾರೂಢ ಪಕ್ಷದಲ್ಲೇ ಐದು ವರ್ಷದಿಂದ ಇದ್ದರೂ, ಕ್ಷೇತ್ರಕ್ಕೆ ನ್ಯಾಯ ದೊರಕಿಸಿಕೊಡಲು ಆಗಲಿಲ್ಲ'.
- ಮೋಹನ್ ಲಿಂಬಿಕಾಯಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.