ADVERTISEMENT

ಬಿರುಗಾಳಿ, ಮಳೆ: ನೂರಾರು ಅಡಿಕೆ ಗಿಡಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:50 IST
Last Updated 21 ಮಾರ್ಚ್ 2017, 19:50 IST
ಬಿರುಗಾಳಿ, ಮಳೆ: ನೂರಾರು ಅಡಿಕೆ ಗಿಡಗಳಿಗೆ ಹಾನಿ
ಬಿರುಗಾಳಿ, ಮಳೆ: ನೂರಾರು ಅಡಿಕೆ ಗಿಡಗಳಿಗೆ ಹಾನಿ   
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೇಬಂಡಾಡಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ವ್ಯಾಪಕ ರೀತಿಯ ಬಿರುಗಾಳಿ, ಮಳೆಯ ಅಬ್ಬರಕ್ಕೆ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವರ ಕೃಷಿ ಜಮೀನಿಗೆ ಹಾನಿ ಉಂಟಾಗಿದ್ದು ನಷ್ಟ ಸಂಭವಿಸಿರುವ ವರದಿ ಆಗಿದೆ. 
 
ಹಿರೇಬಂಡಾಡಿ ನಿವಾಸಿ ದಾಮೋದರ ಎಂಬುವರ ತೋಟದಲ್ಲಿ 15 ಅಡಿಕೆ ಗಿಡ, ಉಮೇಶ್‌ ಅವರ ತೋಟದಲ್ಲಿ 20 ಅಡಿಕೆ ಗಿಡಗಳು ಮುರಿದು ಬಿದ್ದಿವೆ. ನಿಡ್ಡೆಂಕಿಯ ಚಿದಾನಂದ ಎಂಬುವರ ದನದ ಹಟ್ಟಿಯ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದೆ. ಕರೆಂಕಿ ವೆಂಕಟ್ರಮಣ ಗೌಡ ಎಂಬುವರ ತೋಟದಲ್ಲಿ 40 ಅಡಿಕೆ ಗಿಡ, ನಾರ್ಣಪ್ಪ ಗೌಡರ ತೋಟದಲ್ಲಿ 50 ಅಡಿಕೆ ಗಿಡಗಳು ಮುರಿದು ಬಿದ್ದಿವೆ. 
 
ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಅವರ ಜಾಗದಲ್ಲಿದ್ದ ಎರಡು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ತುಂಡಾಗಿವೆ. ಕಾರೆದಕೋಡಿ ಹಾಗೂ ಸೀಂಕ್ರ ಕೊಡಂಗೆ ಎಂಬಲ್ಲಿ ವಿದ್ಯುತ್ ವಯರ್‌ ಮೇಲೆ ಮರ ಬಿದ್ದು, ತಂತಿಗಳು ತುಂಡಾಗಿ ಬಿದ್ದಿವೆ. ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮೇಲ್ಚಾವಣಿಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ ಹೋಗಿದೆ. 
 
ಕುಬಲ ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್‌ ಪರಿವರ್ತಕದ ಪೆಟ್ಟಿಗೆ ಹಾನಿ ಉಂಟಾಗಿದೆ. ಹಿರೇಬಂಡಾಡಿ ಗ್ರಾಮ ವ್ಯಾಪ್ತಿಯಲ್ಲಿ ಮಳೆಯಿಂದ ಲಕ್ಷಾಂತರ ಮೌಲ್ಯದ ಆಸ್ತಿಗೆ ಹಾನಿ ಉಂಟಾಗಿದೆ. ಉಪ್ಪಿನಂಗಡಿ, ಕೊಯಿಲ, ರಾಮಕುಂಜ ಪರಿಸರದಲ್ಲೂ ಮಳೆಯಾಗಿದ್ದು, ಆದರೆ ಯಾವುದೇ ಹಾನಿ ಸಂಭವಿಸಿಲ್ಲ. 
 
ದೊಡ್ಡ ಗಾತ್ರದ ಆಲಿಕಲ್ಲು: ಮಳೆಯೊಂದಿಗೆ ಆಲಿಕಲ್ಲು ಬೀಳುತ್ತಿತ್ತು, ಇವುಗಳು ಜಲ್ಲಿ ಕಲ್ಲಿನಷ್ಟು ದೊಡ್ಡ ಗಾತ್ರದಲ್ಲಿ ಇದ್ದವು. ಹಲವು ಕಡೆ ಮೇಲ್ಚಾವಣಿಗೆ ಅಳವಡಿಸಿದ ಸಿಮೆಂಟ್ ಶೀಟ್‌ಗಳು, ಹೆಂಚುಗಳ ಮೇಲೆ ಆಲಿಕಲ್ಲು ಬಿದ್ದ ಪರಿಣಾಮ ಹಾನಿ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ಹಲವೆಡೆ ತಂಪೆರೆದ ಮಳೆ
ಮೈಸೂರು:
ಜಿಲ್ಲೆಯ ನಂಜನಗೂಡು, ವರುಣಾ, ಸರಗೂರು, ಚಾಮರಾಜನಗರ ಜಿಲ್ಲೆಯ ಹಲವೆಡೆ, ಕೊಡಗಿನ ನಾಪೋಕ್ಲು ಹೋಬಳಿ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ.

ನಂಜನಗೂಡಿನಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಬಿರುಸಿನ ಮಳೆ ಒಂದು ಗಂಟೆ ಕಾಲ ಸುರಿಯಿತು. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪನೆರೆಯಿತು.

ವರುಣಾ ಸಮೀಪದ ನಗರ್ಲೆ, ಬಿಳಿಗೆರೆ, ತಗಡೂರು, ಸುತ್ತೂರು ಭಾಗದಲ್ಲಿ ಬೆಳಿಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ನಂತರ, ಮಧ್ಯಾಹ್ನ 3 ಗಂಟೆಗೂ ಅಲ್ಪ ಮಳೆಯಾಯಿತು. ಈ ಭಾಗದಲ್ಲಿ ಈ ವರ್ಷದ ಎರಡನೇ ಮಳೆ ಇದಾಗಿದೆ. ಸರಗೂರು ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ  ಒಂದು ಗಂಟೆಗೂ ಹೆಚ್ಚು  ಮಳೆಯಾಗಿದೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಸುಕಿನ 4 ಗಂಟೆಯಿಂದಲೇ ಧಾರಾಕಾರ ಮಳೆ ಸುರಿಯಿತು.  ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಸಂಜೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಅರ್ಧ ಗಂಟೆ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಕಾಫಿ ತೋಟಗಳಿಗೆ ಮಳೆ ತಂಪೆರೆದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.