ADVERTISEMENT

`ಬೀಗರ ಔತಣದಲ್ಲೂ ಸಂಹಿತೆ ಉಲ್ಲಂಘನೆ'

ಹೈಕೋರ್ಟ್‌ಗೆ ಆಯೋಗದ ವಿವರಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಬೆಂಗಳೂರು: ಬೀಗರ ಔತಣದ ಹೆಸರಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಉಡುಗೊರೆ ನೀಡುವುದು, ಹಣ ಹಂಚುವಂಥ ಕೃತ್ಯಗಳು ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ತಮ್ಮ ನಿವಾಸದಲ್ಲಿ `ಬೀಗರ ಔತಣ' ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ವಕೀಲ ರಂಗನಾಥ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರ ನ್ಯಾಯಪೀಠಕ್ಕೆ ಆಯೋಗ ಈ ಮಾಹಿತಿ ನೀಡಿತು. `ಇಂಥ ಕಾರ್ಯಕ್ರಮದಲ್ಲಿ ಹಣ ಹಂಚುವಂಥ ಕೃತ್ಯಗಳು ನಡೆದಾಗ, ಅದನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಇಂಥ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ' ಎಂದು ಅವರು ತಿಳಿಸಿದರು.

ಸ್ವಂತ ಹಣದಿಂದ ಬೀಗರ ಔತಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಲ್ಲಿ ರಾಜಕೀಯದ ಲವಲೇಶವೂ ಇಲ್ಲ. ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ವಿಚಾರಣೆಯನ್ನು ಮುಂದೂಡಲಾಗಿದೆ.

ವೃತ್ತಿಯಿಂದ ವಕೀಲರಾದ ರಂಗನಾಥ ಅವರ ವಿವಾಹವು ರೇಖಾ ಎಂಬುವರ ಜೊತೆ ನಡೆದಿದೆ. ಬೀಗರ ಔತಣ ಕಾರ್ಯಕ್ರಮ ಇದೇ 21ರಂದು ನಡೆಯಬೇಕಿದೆ. ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿ ರಂಗನಾಥ ಅವರ ತಂದೆ ಎಂ.ಜಿ. ರಾಜೇಗೌಡ ಅವರು ಅರಕಲಗೂಡು ತಾಲ್ಲೂಕು ಚುನಾವಣಾ ಅಧಿಕಾರಿಗೆ (ತಹಶೀಲ್ದಾರ್) ಇದೇ 8ರಂದು ಮನವಿ ಸಲ್ಲಿಸಿದ್ದರು. ಕಾರ್ಯಕ್ರಮ ಆಯೋಜಿಸಲು ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.