ADVERTISEMENT

ಬೆಂಗಳೂರು ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: ಆತಂಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಬೆಂಗಳೂರು: ಶಾರ್ಟ್ ಸರ್ಕಿಟ್‌ನಿಂದ ನಗರದ ಹೆಬ್ಬಾಳದಲ್ಲಿರುವ ಕೊಲಂಬಿಯ ಏಷ್ಯಾ ಆಸ್ಪತ್ರೆಯ ನೆಲಮಹಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಆಸ್ಪತ್ರೆ ಸಿಬ್ಬಂದಿ ತಕ್ಷಣವೇ 75 ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದರಿಂದ ಯಾವುದೇ ಸಾವು- ನೋವು ಸಂಭವಿಸಿಲ್ಲ. ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಸ್ಪತ್ರೆ ಇದೆ. ನೆಲ ಮಹಡಿ ಸೇರಿದಂತೆ ಎರಡು ಮಹಡಿ ಇರುವ ಆಸ್ಪತ್ರೆ ಕಟ್ಟಡದಲ್ಲಿ 850 ಹಾಸಿಗೆ ವ್ಯವಸ್ಥೆ ಇದೆ. ನೆಲ ಮಹಡಿಯಲ್ಲಿ ಜೋಡಿಸಿದ್ದ ಯುಪಿಎಸ್‌ನಲ್ಲಿ (ಪರ್ಯಾಯ ವಿದ್ಯುತ್ ವ್ಯವಸ್ಥೆ) ಮಧ್ಯಾಹ್ನ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಆವರಿಸಿದ್ದನ್ನು ಗಮನಿಸಿದ ಸಿಬ್ಬಂದಿ, ಆಸ್ಪತ್ರೆಯಲ್ಲಿದ್ದ ಅಗ್ನಿ ನಂದಕಗಳನ್ನು ಬಳಸಿ ಬೆಂಕಿ ನಂದಿಸಲು ಯತ್ನಿಸಿದರು. ಹೊಗೆ ಕೆಲವೇ ನಿಮಿಷಗಳಲ್ಲಿ ಇಡೀ ನೆಲ ಮಹಡಿಯನ್ನು ಆವರಿಸಿದ್ದರಿಂದ ಆತಂಕಗೊಂಡ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಸುದ್ದಿ ಮುಟ್ಟಿಸಿದ್ದಾರೆ.

ಇದೇ ವೇಳೆ ಒಳ ರೋಗಿಗಳಾಗಿ ದಾಖಲಾಗಿದ್ದ 75 ಮಂದಿಯನ್ನು ಹತ್ತಿರದ ಕೊಲಂಬಿಯ ಏಷ್ಯಾ, ಎಂ.ಎಸ್. ರಾಮಯ್ಯ, ಕಾವೇರಿ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು, ಪೋಷಕರರನ್ನು ಹೊರಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡವಾಗಿ ಮಾಹಿತಿ ನೀಡಿದ ಸಿಬ್ಬಂದಿ: ಮಧ್ಯಾಹ್ನ 2.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ 3.13ಕ್ಕೆ ಮಾಹಿತಿ ನೀಡಿದ್ದಾರೆ. ಮೊದಲು ಅವರೇ ಬೆಂಕಿ ನಂದಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಸಿಬ್ಬಂದಿಗೆ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಮೊದಲು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಆ ನಂತರ, ಲಭ್ಯ ಇರುವ ಅಗ್ನಿ ನಂದಕಗಳನ್ನು ಬಳಸಿ ಬೆಂಕಿ ಆರಿಸಲು ಯತ್ನಿಸಬೇಕು. ಆದರೆ ಸಿಬ್ಬಂದಿ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೆಲ ಅಗ್ನಿಶಾಮಕ ಅಧಿಕಾರಿಗಳು ಆರೋಪಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ನಂತರ ಯುಪಿಎಸ್‌ನ ಹತ್ತಾರು ಬ್ಯಾಟರಿಗಳು ಸಿಡಿದಿದ್ದರಿಂದ ಬೆಂಕಿ ಮತ್ತು ಹೊಗೆ ತೀವ್ರವಾಯಿತು. ಹೊಗೆ ನೆಲಮಹಡಿಯಿಂದ ಮೊದಲ ಮಹಡಿಗೆ ವ್ಯಾಪಿಸಿತ್ತು. ಆದ್ದರಿಂದ ಮೊದಲ ಮಹಡಿಯ ಕಿಟಕಿಯ ಗಾಜನ್ನು ಒಡೆದು ಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದರು. ಯುಪಿಎಸ್ ಕೊಠಡಿಯ ಸಮೀಪ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಆಸ್ಪತ್ರೆ ಬಳಿ ನೆರೆದಿದ್ದ ಕೆಲವರು ಮಾಹಿತಿ ನೀಡಿದರು. ಆದರೆ, ಆಸ್ಪತ್ರೆ ಸಿಬ್ಬಂದಿ ಇದನ್ನು ನಿರಾಕರಿಸಿದ್ದಾರೆ.

ಕೊಲಂಬಿಯ ಏಷ್ಯಾ ಆಸ್ಪತ್ರೆಯಲ್ಲಿ ಸುಮಾರು ಇನ್ನೂರು ಮಂದಿ ಕೆಲಸ ಮಾಡುತ್ತಾರೆ. ಬೆಂಕಿ ಹೊತ್ತಿಕೊಂಡಿದೆ ಎಂದು ಗೊತ್ತಾದ ತಕ್ಷಣ ಸಿಬ್ಬಂದಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಅರ್ಧ ಗಂಟೆಯ ಒಳಗೆ ಎಲ್ಲ ರೋಗಿಗಳನ್ನು ಅವರು ಸ್ಥಳಾಂತರಿಸಿದರು. ಆಸ್ಪತ್ರೆಯ ಸಿಬ್ಬಂದಿ ಜೊತೆಗೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯೂ ಸಹಾಯ ಮಾಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಆಸ್ಪತ್ರೆಯಲ್ಲಿ ಅಗ್ನಿನಂದಕ ಸಲಕರಣೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇಡಲಾಗಿತ್ತು. ನೀರು ಪಡೆಯಲು ಅನುಕೂಲವಾಗುವಂತೆ `ಹೈಡ್ರೆಂಟ್ಸ್~ ಮತ್ತು ಸ್ಪಿಂಕ್ಲರ್‌ಗಳನ್ನೂ ಅಳವಡಿಸಲಾಗಿತ್ತು. ಸಲಕರಣೆಗಳನ್ನು ಬಳಸಿ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ದುರಂತ ಸಂಭವಿಸಿದಾಗ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯವರು ಯೋಜನೆಯನ್ನೂ ತಯಾರಿಸಿದ್ದಾರೆ. ಸಿಬ್ಬಂದಿಗೆ ಈ ಬಗ್ಗೆ ತರಬೇತಿಯನ್ನೂ ನೀಡಿದ್ದಾರೆ. ಆದ್ದರಿಂದಲೇ ಅವರು ಚುರುಕಾಗಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದರು.

ಆಸ್ಪತ್ರೆ ತಾತ್ಕಾಲಿಕವಾಗಿ ಬಂದ್: ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವಿದ್ಯುತ್ ಹಾಗೂ ಇತರ ವ್ಯವಸ್ಥೆಗಳೂ ಸರಿ ಇರುವುದನ್ನು ಖಚಿತಪಡಿಸಿಕೊಂಡ ನಂತರ ಆಸ್ಪತ್ರೆಯನ್ನು ಆರಂಭಿಸಲಾಗುತ್ತದೆ. ಎರಡು ದಿನ ಆಗಬಹುದು ಅಥವಾ ಒಂದು ವಾರವಾದರೂ ಆಗಬಹುದು ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.

`ಸಂಬಂಧಿಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು ಅವರನ್ನು ನೋಡಲು ಆಸ್ಪತ್ರೆ ಬಂದಿದ್ದೆ. ವಾಹನವನ್ನು ನೆಲ ಮಹಡಿಯಲ್ಲಿ ನಿಲ್ಲಿಸುತ್ತಿದ್ದ ವೇಳೆ ಹೊಗೆ ಕಾಣಿಸಿಕೊಂಡಿತು. ಆ ವೇಳೆಗಾಗಲೇ ಅಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಹೊಗೆ ಎಲ್ಲೆಡೆ ಆವರಿಸಿತು. ಕೂಡಲೇ ಮೊದಲ ಮಹಡಿಗೆ ಹೋಗಿ ಅಲ್ಲಿಂದ ಮತ್ತೆ ನೆಲಮಹಡಿಗೆ ಬಂದಾಗ ಸಂಪೂರ್ಣ ಹೊಗೆ ಆವರಿಸಿ ಏನೂ ಕಾಣಿಸುತ್ತಿರಲಿಲ್ಲ. ಆತಂಕಗೊಂಡು ಹೊರಗೆ ಬಂದೆ~ ಎಂದು ಸಂತೋಷ್ ನಾರಾಯಣ್ ಎಂಬುವರು ಹೇಳಿದರು.

`ಘಟನೆಗೆ ನಿಖರ ಕಾರಣ ಏನೆಂದು ಗೊತ್ತಾಗಿಲ್ಲ. ತನಿಖೆಯ ನಂತರ ಗೊತ್ತಾಗಲಿದೆ~ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಜಯರಾಮ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ~ ಎಂದು ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ. ಸುನಿಲ್ ಕುಮಾರ್, ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಮತ್ತಿತರರು  ಸ್ಥಳಕ್ಕೆ ಭೇಟಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.