ಬೆಂಗಳೂರು: ‘ದೇಶದಲ್ಲಿಯೇ ಮೊದಲ ಕೃಷಿ ಬಜೆಟ್ ಎಂದು ಸಾಕಷ್ಟು ಪ್ರಚಾರ ಮಾಡಿದ್ದೇ ಮುಖ್ಯಮಂತ್ರಿ ಅವರಿಗೆ ಮುಳುವಾಗಿದೆ. ಆಸೆ ತೋರಿಸಿದಷ್ಟು ರೈತರಿಗೆ ಕೊಡುಗೆಗಳನ್ನು ನೀಡಿಲ್ಲ. ಬೆಟ್ಟದಷ್ಟು ಆಸೆ ತೋರಿಸಿ, ನಿರಾಶೆ ಮೂಡಿ ಸಿದ ಬಜೆಟ್ ಇದಾಗಿದೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ, ಕಾಂಗ್ರೆಸ್ಸಿನ ಮೋಟಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು. ‘ಪ್ರತಿ ಸರ್ಕಾರಗಳು ಕೃಷಿಗೆ ವಿಶೇಷವಾಗಿ ಗಮನ ಹರಿಸುತ್ತ ಬಂದಿವೆ. ಆದರೆ, ಇದನ್ನೇ ಅವರುಗಳು ದೊಡ್ಡದಾಗಿ ಪ್ರಚಾರಗಿಟ್ಟಿಸಿಕೊಳ್ಳಲಿಲ್ಲ. ತುಂಬಾ ಪ್ರಚಾರ ಗಿಟ್ಟಿಸಿಕೊಂಡಿದ್ದೇ ಯಡಿಯೂರಪ್ಪ ಅವರಿಗೆ ಮುಳುವಾಗಿದೆ’ ಎಂದು ಹೇಳಿದರು.
‘ಕೃಷಿ ಬಜೆಟ್ ಎಂಬ ಹೊರಶೃಂಗಾರದ ಹೊದಿಕೆಯನ್ನು ತೆಗೆದು ನೋಡಿದರೆ ಒಳಗೆ ಕಾಣುವುದು ಅದೇ ಹಳೆಯ ಸಾಮಾನ್ಯ, ನಿರಾಕರ್ಷಕ ಬಜೆಟ್...’ ಎಂದು ‘ಪ್ರಜಾವಾಣಿ’ ಪ್ರಕಟಿಸಿದ ಸಂಪಾದಕೀಯದ ಕೆಲವು ಸಾಲುಗಳನ್ನು ಅವರು ಓದಿದರು.
ಬಜೆಟ್ ಹಣ ಸದುಪಯೋಗವಾಗಿಲ್ಲ: ‘ಅಭಿವೃದ್ಧಿ ನಮ್ಮ ಮಂತ್ರ’ ಎಂದು ಮಾತುಮಾತಿಗೂ ಮುಖ್ಯಮಂತ್ರಿ ಅವರು ಹೇಳುತ್ತಾರೆ. ಆದರೆ ಅವರು ಮಂಡಿಸಿದ ಬಜೆಟ್‌ನಲ್ಲಿ ಎಲ್ಲಿಯೂ ರಾಜ್ಯದ ಅಭಿವೃದ್ಧಿ ಕುರಿತಾಗಿ ಸುಳಿವು ಕಾಣುತ್ತಿಲ್ಲ. ಕೇವಲ ಸಚಿವರ ಅಭಿವೃದ್ಧಿಯಾಗುತ್ತಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದರು.
‘ಬಿಜೆಪಿಯೊಳಗಿನ ಭಿನ್ನಮತ ಚಟುವಟಿಕೆಗಳಿಂದಾಗಿಯೇ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಳೆದ ಬಜೆಟ್‌ನಲ್ಲಿ ನೀಡಲಾದ ಬಹಳಷ್ಟು ಪ್ರಮಾಣದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಕೇಂದ್ರ ಸರ್ಕಾರ ನೀಡಿದ ರೂ 988 ಕೋಟಿ ಅನುದಾನ ಬಳಕೆಯಾಗಿಲ್ಲ ಎಂದು ಅವರು ದೂರಿದರು.
ತಾರತಮ್ಯ: ಅನುದಾನ ಹಂಚಿಕೆಯಲ್ಲೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ತಾರತಮ್ಯ ಮಾಡಲಾಗಿದೆ. ಶಿವಮೊಗ್ಗ, ಬಳ್ಳಾರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇನ್ನುಳಿದಂತೆ ಹಲವು ಜಿಲ್ಲೆಗಳಿಗೆ ಕವಡೆ ಕಾಸೂ ನೀಡಿಲ್ಲ ಎಂದರು.ಪಡಿತರ ಚೀಟಿ ಸರಿಪಡಿಸಿ: ಕಡುಬಡವರಿಗೆ ಅತ್ಯವಶ್ಯಕವಾದ ಬಿಪಿಎಲ್ ಕಾರ್ಡ್‌ಗಳಲ್ಲೂ ಅಕ್ರಮ ನಡೆದಿದೆ.
ಸ್ಥಿತಿವಂತರು ಸಹ ಈ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದು, ಬಡವರಿಗೆ ಮೀಸಲಾಗಿಡುವ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಇದನ್ನು ಸರಿಪಡಿಸಿ ಎಂದು ಅವರು ಒತ್ತಾಯಿಸಿದರು. ಪರಿಷತ್ತಿನ ಎಲ್ಲ ಸದಸ್ಯರೂ ಪಕ್ಷಬೇಧ ಮರೆತು ಮೋಟಮ್ಮ ಅವರ ಮಾತಿಗೆ ಧ್ವನಿಗೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.