ADVERTISEMENT

ಬೆಳಗಾವಿ ಪಾಲಿಕೆ ರದ್ದತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಬೆಳಗಾವಿ: ಧಾರವಾಡದ ಹೈಕೋರ್ಟ್ ಸಂಚಾರಿ ಪೀಠದ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯು ಸೋಮವಾರ  ಹಮ್ಮಿಕೊಂಡಿದ್ದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಪಾಲ್ಗೊಂಡ ಮಹಾನಗರ ಪಾಲಿಕೆ ಸದಸ್ಯರು `ಸೂಪರ್‌ಸೀಡ್~ ಮಾಡಿದ್ದ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಾಚಾರಿ ಎದುರು ಹಾಜರಾದ ಸದಸ್ಯರು,  ನಗರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಬಾರದು. ಅಧಿಕಾರಾವಧಿ ಪೂರ್ಣಗೊಳಿಸಲು ಚುನಾಯಿತ ಸದಸ್ಯರಿಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಪಾಲಿಕೆಯ ಒಟ್ಟು 58 ಸದಸ್ಯರ ಪೈಕಿ ಮೇಯರ್ ಮಂದಾ ಬಾಳೇಕುಂದ್ರಿ, ಉಪ ಮೇಯರ್ ರೇಣು ಕಿಲ್ಲೇಕರ ಸೇರಿದಂತೆ 56 ಸದಸ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ADVERTISEMENT

`ಪಾಲಿಕೆ ವಿಸರ್ಜಿಸಿದರೆ ತಪ್ಪು ಮಾಡದೇ ಇರುವ ಸದಸ್ಯರಿಗೆ ಅನ್ಯಾಯವಾಗುತ್ತದೆ. ಪಾಲಿಕೆಯಲ್ಲಿ ಸರಿಯಾಗಿ ಸಭೆ ನಡೆಸಲು ಅವಕಾಶ ನೀಡದೇ ಇರುವ ತಪ್ಪಿತಸ್ಥ ಸದಸ್ಯರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು” ಎಂದು ಕನ್ನಡಪರ ಸದಸ್ಯರು ಒತ್ತಾಯಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡರು. ಜೊತೆಗೆ ಧ್ವನಿ ಮುದ್ರಣವನ್ನೂ ಮಾಡಿಕೊಂಡರು. ನಗರಾಭಿವೃದ್ಧಿ ಇಲಾಖೆಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ಆ ಬಳಿಕ ಪಾಲಿಕೆಯ `ಸೂಪರ್‌ಸೀಡ್~ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ.

2011 ಡಿ. 15 ರಂದು ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ 24 ಸದಸ್ಯರು ಧಾರವಾಡದ ಸಂಚಾರಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

`ಸೂಪರ್‌ಸೀಡ್~ ಆದೇಶವನ್ನು ಜೂನ್ 19ರಂದು ರದ್ದುಗೊಳಿಸಿದ್ದ ಹೈಕೋರ್ಟ್, ಸರ್ಕಾರವು ಪಾಲಿಕೆಗೆ ನವೆಂಬರ್ 24, 2011ರಂದು ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ಸದಸ್ಯರಿಗೆ ಜೂನ್ 25ರಂದು ಅವಕಾಶ ಕಲ್ಪಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.