ADVERTISEMENT

ಬೆಳೆಗೆ ತಕ್ಕಷ್ಟೇ ಮಳೆ: ರೈತರಲ್ಲಿ ತಪ್ಪದ ತಳಮಳ

ಬರ ಬದುಕು ಭಾರ - ಗುಲ್ಬರ್ಗ ಜಿಲ್ಲೆ

ಸುಭಾಸ ಎಸ್.ಮಂಗಳೂರ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಗುಲ್ಬರ್ಗ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ತುಸು ಹೆಚ್ಚೇ ಮಳೆ ಸುರಿದಿದೆ. ಆದರೆ, ಬೆಳೆಗೆ ತಕ್ಕಷ್ಟೇ ಮಳೆ ಆಗಿರುವುದರಿಂದ ಈ ಬಾರಿಯೂ ಗುಳೆ ತಪ್ಪಿದ್ದಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರೈತರು ತೊಗರಿ, ಉದ್ದು, ಸೋಯಾಬಿನ್, ಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆ ಬೆಳೆದಿದ್ದು ಭರ್ಜರಿ ಫಸಲನ್ನು ಎದುರು ನೋಡುತ್ತಿದ್ದಾರೆ. ಕೆಲವೆಡೆ ಹೆಸರಿನ ರಾಶಿ ಮುಗಿದಿದ್ದು, ರೈತರು ಕೈ ತುಂಬ ಹಣ ಪಡೆದಿದ್ದಾರೆ. ಆದರೆ, ಆಳಂದ, ಅಫಲಜಪುರ ಮತ್ತು ವಾಡಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆ ಕುಂಠಿತಗೊಂಡಿದ್ದರಿಂದ ‘ಬರದ ಭೀತಿ’ ಆವರಿಸಿದೆ.

ಆಳಂದ, ಅಫಜಲಪುರ, ಚಿಂಚೋಳಿ, ಚಿತ್ತಾಪುರ, ಸೇಡಂ, ಜೇವರ್ಗಿ, ಶಹಾಬಾದ್ ಮತ್ತು ವಾಡಿಯಲ್ಲಿ ಜನವರಿಯಿಂದ ಜೂನ್ವರೆಗೆ ಶೇ 100 ರಷ್ಟು ಮಳೆ ಆಗಿದೆ. ಆದರೆ, ಆಗಸ್ಟ್ ನಲ್ಲಿ ಈ ಪ್ರಮಾಣ ಶೇ 42.34 ಕ್ಕೆ ಕುಸಿದಿದ್ದು, ಈ ಭಾಗದ ರೈತರನ್ನು ಕಂಗೆಡಿದೆ.

‘ಮುಂಗಾರು ಮಳೆ ಸಕಾಲಕ್ಕೆ ಬಂದಿದ್ದರಿಂದ ಪ್ರಮುಖ ಬೆಳೆಗಳಾದ ತೊಗರಿ, ಉದ್ದು, ಹತ್ತಿ ಬಿತ್ತನೆ ಮಾಡಿದ್ದೇವೆ. ಆದರೆ ಒಂದು ತಿಂಗಳಿನಿಂದ ಮಳೆ ಮಾಯವಾಗಿದೆ. ಹೀಗಾಗಿ ಫಸಲು ಒಣಗುತ್ತಿದೆ. ತೊಗರಿಗೆ ಮಳೆ-ಬಿಸಿಲು ಎರಡೂ ಬೇಕು. ಈಗ ಹೂ ಕಟ್ಟುವ ಸಮಯ. ಈ ಸಮಯದಲ್ಲಿ ಮಳೆ ಆಗದಿದ್ದರೆ ಬೆಳೆ ಕೈ ಸೇರುವುದಿಲ್ಲ. ಹೂ ಕಟ್ಟುವ ಹಂತದಲ್ಲಿ ಮಳೆ ಆದರೆ ಹೂಗಳು ಉದುರುತ್ತವೆ. ಎರಡು ವರ್ಷಗಳಿಂದ ಬರ ಎದುರಿಸುತ್ತಿದ್ದೇವೆ. ಈ ಬಾರಿಯೂ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುಳೆ ತಪ್ಪಿದ್ದಲ್ಲ’ ಎಂದು ಅಫಜಲಪುರದ ರೈತ ಚಂದ್ರಶೇಖರ  ಕರಜಗಿ ಅಸಹಾಯಕತೆ ವ್ಯಕ್ತಪಡಿಸಿದರು.

‘ವಾಡಿ ವ್ಯಾಪ್ತಿಯ ಇಂಗಳಗಿ, ಕುಂದನೂರು, ಕಡಬೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತೊಗರಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ ಮಳೆ ಬಾರದೆ ಬೆಳೆ ಒಣಗುತ್ತಿದೆ. ಸಾಲ ಮಾಡಿ  ಬಿತ್ತಿದೆ ಬೆಳೆ ಕೈತಪ್ಪು ಭೀತಿ ಇದೆ. ಮಳೆ ಇಲ್ಲದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ’ ಎಂದು ಕಡಬೂರು ಗ್ರಾಮದ ರೈತ ಮಾಳಪ್ಪ ನೋವು ತೊಡಿಕೊಂಡರು.

‘2011-12 ಮತ್ತು 2012-13 ನೇ ಸಾಲಿನಲ್ಲಿ ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿತ್ತು. ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಿದೆ. ಸರ್ಕಾರ 145 ಹೋಬಳಿಗಳಲ್ಲಿ ಬರ ಇದೆ ಎಂದು ಹೇಳಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಯಾವ ಹೋಬಳಿಗಳಲ್ಲಿ ಬರ ಇದೆ ಎಂಬುದನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದಾಗ್ಯೂ, ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ’ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳೆಗೆ ತಕ್ಕಷ್ಟು ಮಳೆ
ಪೂರ್ವ ಮುಂಗಾರಿನ ಹಾಗೆ ಮಳೆ ಮುಂದುವರಿದರೆ ಸಮಸ್ಯೆ ಇಲ್ಲ. ಸಮೃದ್ಧ ಲಾಭ ನಿರೀಕ್ಷಿಸಬಹುದು. ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ನಮಗೆ, ಇದೀಗ ಮಳೆ ಕೊರತೆಯಾಗಿದ್ದು, ಪರದಾಡುವಂತಾಗಿದೆ. ಬೆಳೆಗೆ ತಕ್ಕಷ್ಟು ಮಳೆ ಆಗಿದೆಯಾದರೂ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರಿಲ್ಲ.
–ಕಿಸನ್ ಜಾಧವ, ರೈತ, ಆಳಂದ

ಈ ಬಾರಿಯೂ ಗುಳೆ ತಪ್ಪಿದ್ದಲ್ಲ!
ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಆಗಿದ್ದರಿಂದ ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಇಲ್ಲದ್ದರಿಂದ ತೊಗರಿ, ಉದ್ದಿನ ಬೆಳೆಗಳು ಒಣಗುತ್ತಿವೆ. ಬಿತ್ತನೆ ಬೀಜಕ್ಕಾಗಿ ಸಾವಿರಾರು ರೂಪಾಯಿ ಸಾಲ ಮಾಡಿದ್ದೇನೆ. ಮಳೆ ಬಾರದ್ದರಿಂದ ತೊಗರಿ ಬೆಳೆ ಕೈಕೊಡುವ ಹಂತ ತಲುಪಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುಳೆ ತಪ್ಪಿದ್ದಲ್ಲ.
-ಬಾಬು ಗಾಜರೆ, ರೈತ, ಹಿರೋಳ್ಳಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT