ಬೆಂಗಳೂರು: ಭದ್ರಾ ಮೇಲ್ದಂಡೆ ಎರಡನೇ ಹಂತದ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎರಡನೇ ವರದಿ ಸಲ್ಲಿಸಿದ್ದಾರೆ.
2011ರ ಜುಲೈ 27ರಂದು ದತ್ತ ಖಾಸಗಿ ದೂರು ಸಲ್ಲಿಸಿದ್ದರು. `ಅಕ್ರಮವಾಗಿ ಕಾಮಗಾರಿಯ ಗುತ್ತಿಗೆ ನೀಡಿರುವುದಕ್ಕಾಗಿ ಯಡಿಯೂರಪ್ಪ ಅವರು ಆರ್.ಎನ್.ಶೆಟ್ಟಿ ಸಮೂಹದಿಂದ 13 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಆರ್.ಎನ್.ಶೆಟ್ಟಿ ಸಮೂಹದ ಮುರ್ಡೇಶ್ವರ ಕಂಪೆನಿಯು ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯನ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್‌ಗೆ 11 ಕೋಟಿ ರೂಪಾಯಿ ನೀಡಿದೆ.
ಇದೇ ಕಂಪೆನಿಯು ಯಡಿಯೂರಪ್ಪ ಅವರ ಪುತ್ರರು ಮತ್ತು ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಪಾಲುದಾರಿಕೆಯ ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಕಂಪೆನಿಗೆ ರೂ 2 ಕೋಟಿ ಸಂದಾಯ ಮಾಡಿದೆ~ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಆರೋಪಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಯಡಿಯೂರಪ್ಪ ಮತ್ತು ಅವರ ಪುತ್ರರು, ಅಳಿಯನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ವರದಿ ಸಲ್ಲಿಸಿದ್ದರು.
ತನಿಖಾ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಕೇಳಿತ್ತು. ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್, 250 ಪುಟಗಳ ವರದಿಯನ್ನು ಸಲ್ಲಿಸಿದರು.
ಆರ್.ಎನ್.ಶೆಟ್ಟಿ ಸಮೂಹ, ಮುರ್ಡೇಶ್ವರ ಪವರ್ ಕಾರ್ಪೊರೇಷನ್, ಧವಳಗಿರಿ ಪ್ರಾಪರ್ಟೀಸ್ ಹಾಗೂ ಸಹ್ಯಾದ್ರಿ ಹೆಲ್ತ್‌ಕೇರ್ ಕಂಪೆನಿಗಳ ಆರ್ಥಿಕ ವ್ಯವಹಾರಗಳ ಸಮಗ್ರ ವಿವರವನ್ನು ತನಿಖಾಧಿಕಾರಿ ನ್ಯಾಯಾಲಯಕ್ಕೆ ನೀಡಿದ್ದಾರೆ. ಆರ್.ಎನ್.ಶೆಟ್ಟಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ನವೀನ್ ಶೆಟ್ಟಿ ಅವರ ಹಣಕಾಸು ವ್ಯವಹಾರಗಳ ಬಗ್ಗೆಯೂ ಈ ವರದಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭದ್ರಾ ಮೇಲ್ದಂಡೆ ಎರಡನೇ ಹಂತದ ಕಾಮಗಾರಿಯನ್ನು ಆರ್.ಎನ್.ಎಸ್.-ಜ್ಯೋತಿ ಪಾಲುದಾರಿಕೆ ಕಂಪೆನಿಗೆ ನೀಡಲಾಗಿತ್ತು. ಜ್ಯೋತಿ ಕಂಪೆನಿಯನ್ನು ಹಿಮಾಚಲಪ್ರದೇಶ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದ್ದರೂ, ಅದನ್ನು ಕಡೆಗಣಿಸಿ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ದೂರಿನಲ್ಲಿತ್ತು.
`ಪಂಜಾಬ್ ಸರ್ಕಾರ ಜ್ಯೋತಿ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ಕುರಿತು ನೀರಾವರಿ ಇಲಾಖೆ, ಕರ್ನಾಟಕ ವಿದ್ಯುತ್ ನಿಗಮ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಸಂಸ್ಥೆ ಅಥವಾ ಇಲಾಖೆಗಳಿಗೆ ಮಾಹಿತಿ ಇರಲಿಲ್ಲ~ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೂರುದಾರ ದತ್ತ ಅವರಿಂದ ಹಿಂದೆ ಹೇಳಿಕೆ ಪಡೆದಿರಲಿಲ್ಲ. ಈಗ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡು, ವರದಿಯೊಡನೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಡಿವೈಎಸ್‌ಪಿ ಗಿರೀಶ್ ಅವರು ವರದಿಯನ್ನು ಸಲ್ಲಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.