ಬೆಂಗಳೂರು: ಉಡುಪಿಯ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಜಿಪಿ ಓಂಪ್ರಕಾಶ್, ‘ಸ್ಥಳೀಯ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ತನಿಖೆ ನಿಷ್ಪಕ್ಷಪಾತ ರೀತಿಯಲ್ಲಿ ನಡೆಯಬೇಕೆಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ’ ಎಂದು ಹೇಳಿದರು.
‘ತನಿಖಾ ತಂಡಗಳು ಈಗಾಗಲೇ ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ ಹಾಗೂ ಉಡುಪಿ ಎಸ್ಪಿ ಕೆ.ಟಿ.ಬಾಲಕೃಷ್ಣ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿವೆ’ ಎಂದು ಮಾಹಿತಿ ನೀಡಿದರು.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಈಗಾಗಲೇ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ಎಂಬುವರನ್ನು ಬಂಧಿಸಿದ್ದಾರೆ. ಜುಲೈ 28ರಂದು ಅವರನ್ನು ಹತ್ಯೆಗೈದಿದ್ದ ಆರೋಪಿಗಳು, ಯಜ್ಞಕುಂಡದಲ್ಲೇ ಶವ ಸುಟ್ಟಿದ್ದರು ಎನ್ನಲಾಗಿದೆ.
‘ಪೊಲೀಸರು ಆರೋಪಿಗಳಿಗೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರನ್ನು ಬಂಧಿಸದೆ ಬಿಟ್ಟಿದ್ದಾರೆ. ಹೀಗಾಗಿ, ನ್ಯಾಯಯುತ ತನಿಖೆಯಾಗಬೇಕು’ ಎಂದು ಆಗ್ರಹಿಸಿ ಕೆಲ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರಿಗೆ ಮನವಿ ಮಾಡಿದ್ದರು.
ಪೊಲೀಸರ ವಿರುದ್ಧ ಕೇಳಿ ಬಂದ ಈ ಆರೋಪಗಳನ್ನು ಗೃಹಸಚಿವ ಜಿ.ಪರ ಮೇಶ್ವರ್ ಅವರ ಗಮನಕ್ಕೆ ತಂದಿದ್ದ ಮಧ್ವರಾಜ್, ಸಿಐಡಿಯಿಂದ ತನಿಖೆ ಮಾಡಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದರು. ಅದರಂತೆ ಗೃಹಸ ಚಿವರು ಪ್ರಕರಣ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.