ಮೈಸೂರು: ರಾಜ್ಯದಲ್ಲಿ 125 ಪದವೀಧರರು ಹಾಗೂ 44 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಸಂಗತಿ ಬೆಳಕಿಗೆ ಬಂದಿದೆ.
ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಉದ್ಯೋಗರಹಿತರ ಶಿಕ್ಷಣಮಟ್ಟ ಹಾಗೂ ಮುಖ್ಯ ಚಟುವಟಿಕೆ’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ. ಕರ್ನಾಟಕದಲ್ಲಿರುವ 10,682 ಭಿಕ್ಷುಕರಲ್ಲಿ 2,547 ಮಂದಿ ಅಕ್ಷರಸ್ಥರು ಇದ್ದಾರೆ. ಇವರಲ್ಲಿ 1,446 ಮಂದಿ ಪ್ರೌಢಶಾಲೆ, 459 ಮಂದಿ ಎಸ್ಸೆಸ್ಸೆಲ್ಸಿ/ಪಿಯುಸಿ ಪೂರೈಸಿದವರು, 23 ಮಂದಿ ತಾಂತ್ರಿಕ ಡಿಪ್ಲೊಮಾ ಮಾಡಿದವರು ಸೇರಿದ್ದಾರೆ.
ರಾಜಧಾನಿಯಲ್ಲಿ ಹೆಚ್ಚು ಭಿಕ್ಷುಕರು: ಬೆಂಗಳೂರು ನಗರದಲ್ಲಿ ಅತ್ಯಧಿಕ ಭಿಕ್ಷುಕ ರಿದ್ದು, ಅವರಲ್ಲಿ 77 ಪದವೀಧರರು ಹಾಗೂ 25 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಇರುವುದು ಗೊತ್ತಾಗಿದೆ. ಈ ನಗರಿಯ 206 ಭಿಕ್ಷುಕರು ಮೆಟ್ರಿಕ್/ಪಿಯುಸಿ ಪೂರೈಸಿದ್ದಾರೆ. ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದೆ.
ಇಲ್ಲಿ ಒಂಬತ್ತು ಮಂದಿ ಪದವೀಧರರು ಹಾಗೂ ಮೂವರು ಸ್ನಾತಕೋತ್ತರ ಪದವೀಧರರು ಇರುವುದು ವರದಿಯ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ಬಿ.ಎ ಪದವಿ ಮೊದಲ ವರ್ಷ ಪೂರೈಸಿರುವ ವೆಂಕಟೇಶ್ ಎಂಬುವರು ಮೈಸೂರು ಮೃಗಾಲಯ ಹಾಗೂ ಅಂಬಾವಿಲಾಸ ಅರಮನೆ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.
‘ಅಪ್ಪ ಸಾವನ್ನಪ್ಪಿದ ಬಳಿಕ ವಿದ್ಯಾಭ್ಯಾಸ ತೊರೆದು ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ 5 ವರ್ಷ ದುಡಿದೆ. ಎರಡು ವರ್ಷ ಮೈಸೂರು ನಗರ ಪಾಲಿಕೆಯಲ್ಲಿ ಕೆಲಸ ಮಾಡಿದೆ. ತಿಂಗಳಿಗೆ 4 ಸಾವಿರ ರೂಪಾಯಿ ಸಿಗುತಿತ್ತು. ಕೂಡಿಟ್ಟಿದ್ದ ಹಣ ತಂಗಿ ಮದುವೆಗೆ ಖರ್ಚಾಯಿತು. ಅನಾರೋಗ್ಯಕ್ಕೆ ಒಳಗಾಗಿರುವ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಭಿಕ್ಷಾಟನೆಗಿಳಿದೆ. ಈಗ ತಿಂಗಳಿಗೆ 6–7 ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದು ವೆಂಕಟೇಶ್ ತಿಳಿಸಿದರು.
ರಾಜ್ಯದಲ್ಲಿ ನಗರ ಭಾಗದಲ್ಲಿ ಹೆಚ್ಚು ಭಿಕ್ಷುಕರಿರುವುದು ಅಂಕಿ–ಅಂಶಗಳಿಂದ ಗೊತ್ತಾಗಿದೆ. ಕೊಡಗು ಜಿಲ್ಲೆಯಲ್ಲಿ ಕೇವಲ 30 ಭಿಕ್ಷುಕರಿದ್ದಾರೆ. ಇವರಲ್ಲಿ 14 ಮಂದಿ ಅಕ್ಷರಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.