ಹುಬ್ಬಳ್ಳಿ: ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಗಾಯಕ, ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಹೆಸರಿನಲ್ಲಿ ರುವ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ಭಾರಿ ಮೊತ್ತದ ಗೌರವ ಧನ ಹಂಚಿಕೆ ವಿಷಯದಲ್ಲಿ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ಸಂಬಂಧ ಮೊದಲ ಪತ್ನಿಯ ನಾಲ್ವರು ಮಕ್ಕಳು ಪುಣೆಯಲ್ಲಿರುವ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಪುಣೆಯಲ್ಲಿ ರುವ ಒಂದು ಬಂಗಲೆ, ಎರಡು ಫ್ಲ್ಯಾಟ್ ಗಳ ಮಾರಾಟ ಅಥವಾ ವರ್ಗಾವಣೆ ಮಾಡದಂತೆ ನ್ಯಾಯಾಲಯ ಕಳೆದ ಸೆ. 27ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಪಶೃತಿ ಯಾಕೆ?: ಭೀಮಸೇನ ಜೋಶಿ ಅವರಿಗೆ ಸುನಂದಾ ಮೊದಲ ಪತ್ನಿಯಾ ದರೆ, ವತ್ಸಲಾ ಎರಡನೇ ಪತ್ನಿ. ಸುನಂದಾ ಅವರಿಗೆ ರಾಘವೇಂದ್ರ, ಉಷಾ, ಸುಮಂಗಲಾ ಹಾಗೂ ಆನಂದ ಎಂಬ ಮಕ್ಕಳಿದ್ದಾರೆ. ವತ್ಸಲಾ ಅವರಿಗೆ ಗಾಯಕ ಶ್ರೀನಿವಾಸ ಜೋಶಿ, ಜಯಂತ ಹಾಗೂ ಶುಭದಾ ಎಂಬ ಮಕ್ಕಳಿದ್ದಾರೆ.
‘2011ರ ಜ. 24ರಂದು ನಮ್ಮ ತಂದೆ ನಿಧನ ಹೊಂದಿದರು. ಕೆಲ ದಿನಗಳ ನಂತರ ಶ್ರೀನಿವಾಸ ಅವರ ಮನೆಯಲ್ಲಿ ದೊರೆತ ತಂದೆಯವರು ಬರೆದಿದ್ದಾರೆ ಎನ್ನಲಾದ ಉಯಿಲಿನಲ್ಲಿ ನಮಗೆ ಅನ್ಯಾಯವಾಗುವಂತಹ ಅಂಶಗಳಿದ್ದವು. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರ ಬೇಕಾಯಿತು’ ಎಂದು ಮೊದಲ ಪತ್ನಿ ಸುನಂದಾ ಅವರ ಹಿರಿಯ ಪುತ್ರ ರಾಘವೇಂದ್ರ ಜೋಶಿ ಹೇಳುತ್ತಾರೆ.
ಪುಣೆಯಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಮ್ಮ ತಂದೆ ಮಾಡಿರುವ ಒಟ್ಟು ಆಸ್ತಿ ಮತ್ತು ವಿವಿಧ ಸಂಸ್ಥೆಗಳಿಂದ ಸಂದಾಯವಾಗುತ್ತಿರುವ ಗೌರವ ಧನ ದಲ್ಲಿ ಒಟ್ಟು 7 ಭಾಗ ಮಾಡಿ ಹಂಚಿಕೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾವು ನಾಲ್ಕು ಜನರು ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದು ವಿವರಿಸಿದರು.
‘ಪುಣೆಯ ಪ್ರತಿಷ್ಠಿತ ಬಡಾವಣೆ ಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ‘ಕಲಾಶ್ರೀ’ ಎಂಬ ಬಂಗಲೆ, ‘ಸಂಕುಲ ಹೈರೈಸ್’ ಅಪಾರ್ಟ್‌ಮೆಂಟ್ ನಲ್ಲಿರುವ ಅಂದಾಜು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಎರಡು ಫ್ಲಾಟ್‌ಗಳನ್ನು ಮಾರಾಟ ಇಲ್ಲವೇ ವರ್ಗಾವಣೆ ಮಾಡಬಾರದು. ಅಲ್ಲದೇ, ತಂದೆಯವರ ಧ್ವನಿ ಮುದ್ರಿತ ಗಾಯನ ಗಳ ಬಳಕೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಗೌರವ ಧನ ನೀಡುತ್ತಿವೆ. ಈ ಗೌರವ ಧನದಲ್ಲಿ ಸಹ ಪಾಲು ನೀಡಬೇಕು ಎಂದು ವಾದ ಮಂಡಿಸಿದ್ದೇವೆ’ ಎಂದೂ ಸ್ಪಷ್ಟಪಡಿಸಿದರು.
‘2006ರಿಂದಲೇ ನಮ್ಮ ತಂದೆಯ ವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ನರ ಸಂಬಂಧಿ ತೊಂದರೆಯಿಂದ ಬಳಲು ತ್ತಿದ್ದ ಅವರನ್ನು 2008ರಲ್ಲಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಧೀನ ಕಳೆದುಕೊಂಡಿದ್ದ ಅವರಿಗೆ ದಿನಕ್ಕೆ ಹಲವಾರು ಬಾರಿ ಮೂರ್ಛೆ ಹೋಗುತ್ತಿದ್ದರು. ಇಂತಹ ಸ್ಥಿತಿಯಲ್ಲಿದ್ದ ಅವರು 8 ಪುಟಗಳ ಉಯಿಲು ಬರೆ ಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿ ದರು.
‘ನಾನು ಪದ್ಮಭೂಷಣ ಭೀಮಸೇನ ಜೋಶಿ....‘ ಎಂಬುದಾಗಿ ಉಯಿಲು ಆರಂಭವಾಗುತ್ತದೆ. ಸ್ವತಃ ನನ್ನ ತಂದೆ ಯವರು ಈ ರೀತಿ ಬರೆಯಲು ಹೇಗೆ ಸಾಧ್ಯ’ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, ಉಯಿಲಿನಲ್ಲಿರುವ ಹಲವಾರು ಸಂಗತಿಗಳು ದೋಷಪೂರಿತವಾಗಿವೆ ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ’ ಎಂದರು.
‘ಆ ಮನೆಯವರು (ಎರಡನೇ ಪತ್ನಿ ವತ್ಸಲಾ) ನಮ್ಮ ತಂದೆಗೆ ಸಾಕಷ್ಟು ಚಿತ್ರಹಿಂಸೆಯನ್ನು ನೀಡಿದ್ದಾರೆ. ಈಗ ಆಸ್ತಿ ಮತ್ತು ಗೌರವ ಧನ ಹಂಚಿಕೆಯಲ್ಲಿ ಸಹ ಅನ್ಯಾಯವಾಗುತ್ತಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದೂ ಹೇಳಿದರು.
ಈ ಸಂಬಂಧ ವತ್ಸಲಾ ಅವರ ಪುತ್ರ ಶ್ರೀನಿವಾಸ ಜೋಶಿ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.