ADVERTISEMENT

ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 4:39 IST
Last Updated 25 ಏಪ್ರಿಲ್ 2018, 4:39 IST
ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ
ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ   

ಬೆಂಗಳೂರು: ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ 33 ಗುಂಟೆ ಗೋಮಾಳ ಕಬಳಿಕೆಗೆ ಸಂಬಂಧಿಸಿ ಆರೋಪಿಗೆ 1 ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿ ‘ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ’ ಮಂಗಳವಾರ ಆದೇಶ ಹೊರಡಿಸಿದೆ. ಈ ನ್ಯಾಯಾಲಯ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಭೂಗಳ್ಳರಿಗೆ ಶಿಕ್ಷೆ ವಿಧಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಕಾನೂನು ಸಚಿವರ ಕಚೇರಿ ಮುಂದೆ ಧರಣಿ ನಡೆಸಿದ್ದರು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, 2016ರ ಆಗಸ್ಟ್‌ 31ರಂದು ನ್ಯಾಯಾಲಯ ಸ್ಥಾಪಿಸಿತ್ತು.

ರಾಜ್ಯದಲ್ಲಿ 11.07 ಲಕ್ಷ ಎಕರೆ (ಕಂದಾಯ ಹಾಗೂ ಅರಣ್ಯ ಸೇರಿ) ಕಬಳಿಕೆಯಾಗಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ನೇತೃತ್ವದ ಕಾರ್ಯಪಡೆ ವರದಿ ಸಲ್ಲಿಸಿತ್ತು. ಅದನ್ನು ಆಧರಿಸಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಇಲ್ಲಿಯವರೆಗೆ 14 ಸಾವಿರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3,500 ಪ್ರಕರಣಗಳು ಕೋರ್ಟ್‌ನಲ್ಲಿ ನೋಂದಣಿ ಆಗಿವೆ.

ADVERTISEMENT

ಶೆಟ್ಟಿಹಳ್ಳಿಯ ‍ಸರ್ವೆ ಸಂಖ್ಯೆ 11ರ 33 ಗುಂಟೆಯನ್ನು ಕೆ.ಇ.ಷಡಕ್ಷರಯ್ಯ ಎಂಬವರು ಕಬಳಿಸಿದ್ದರು. ಈ ಪ್ರಕರಣ ಆರು ತಿಂಗಳ ಹಿಂದೆ ದಾಖಲಾಗಿತ್ತು. ಚನ್ನಗಿರಿ ತಹಶೀಲ್ದಾರ್, ಸರ್ವೆಯರ್‌ ಹಾಗೂ ಕಂದಾಯ ನಿರೀಕ್ಷಕ ದಾಖಲೆಗಳನ್ನು ಒದಗಿಸಿ ಸಾಕ್ಷ್ಯ ನುಡಿದಿದ್ದರು. ನ್ಯಾಯಮೂರ್ತಿ ಎಚ್‌.ಎನ್‌. ನಾರಾಯಣ, ಬಿ.ಬಾಲಕೃಷ್ಣ ಹಾಗೂ ಬಿ.ಆರ್‌.ಜಯರಾಮರಾಜೇ ಅರಸ್‌ ಅವರ ಪೀಠವು ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಸ್‌.ಪಾಟೀಲ ವಾದಿಸಿದ್ದರು.

‘ಒತ್ತುವರಿದಾರರ ಮೇಲಿನ ಆರೋಪಗಳು ಸಾಬೀತಾದರೆ 3 ವರ್ಷದ ವರೆಗೆ ಶಿಕ್ಷೆ ಹಾಗೂ ದಂಡ ವಿಧಿಸುವ ಅಧಿಕಾರ ವಿಶೇಷ ನ್ಯಾಯಾಲಯಕ್ಕೆ ಇದೆ’ ಎಂದು ಬಿ.ಎಸ್‌.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.