ADVERTISEMENT

ಭೂಮಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಬೆಂಗಳೂರು:  ಹಿಂದುಳಿದ ಪ್ರದೇಶವಾದ ಬೀದರ್‌ಗೆ ಎಚ್‌ಎಎಲ್‌ನ ಹೆಲಿಕಾಪ್ಟರ್ ತಯಾರಿಕಾ ಘಟಕ ಮಂಜೂರು ಮಾಡಲು ಕೇಂದ್ರ ಸರ್ಕಾರ ಮುಂದೆ ಬಂದಿದ್ದು, ಇದಕ್ಕೆ ಬೇಕಾದ 500 ಎಕರೆ ಜಮೀನು ನೀಡುವಂತೆ ಸಂಸದ ಧರ್ಮಸಿಂಗ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಿದೆ.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಶನಿವಾರ ಸದಾನಂದಗೌಡ ಅವರನ್ನು ಭೇಟಿ ಮಾಡಿದ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು. ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಹೆಲಿಕಾಪ್ಟರ್ ತಯಾರಿಕಾ ಘಟಕ ಮಂಜೂರು ಮಾಡಲು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭೂಮಿ ನೀಡುವಂತೆ ತಿಳಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಜಾಗ ನೀಡಬೇಕು ಎಂದು ಧರ್ಮಸಿಂಗ್ ಮನವರಿಕೆ ಮಾಡಿಕೊಟ್ಟರು.

ಬೀದರ್ ಜಿಲ್ಲೆಯ ಔರಾದ್‌ನಲ್ಲಿ 300 ಎಕರೆ ಸರ್ಕಾರಿ ಭೂಮಿ ಇದೆ. ಇದರ ಸುತ್ತಮುತ್ತಲಿನ 200 ಎಕರೆ ಭೂಮಿ ಸ್ವಾಧೀನ ಮಾಡಿಕೊಟ್ಟರೆ ಘಟಕ ಸ್ಥಾಪನೆಗೆ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸದಾನಂದ ಗೌಡ, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಧರ್ಮಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಹೈದರಾಬಾದ್‌ನಲ್ಲಿರುವ ಮೌಲಾನಾ ಆಜಾದ್ ವಿಶ್ವವಿದ್ಯಾಲಯವು ಬೀದರ್‌ನಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಲು ಮುಂದೆ ಬಂದಿದ್ದು, ಅದಕ್ಕೆ ಬೇಕಾಗಿರುವ 10 ಎಕರೆ ಭೂಮಿ ನೀಡುವಂತೆ ಮನವಿ ಮಾಡಲಾಗಿದೆ. ಆ ಭಾಗದಲ್ಲಿ ಉರ್ದು ಪ್ರಭಾವ ಹೆಚ್ಚಾಗಿದ್ದು, ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಿಂದ ಅನುಕೂಲವಾಗಲಿದೆ ಎಂದರು.

ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಂ ಖಾನ್, ಖಾಜಿ ಅರಶದ ಅಲಿ ಸೇರಿದಂತೆ ಪಕ್ಷದ ಮುಖಂಡರು, ಮಾಜಿ ಶಾಸಕರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.