ADVERTISEMENT

ಭ್ರಷ್ಟಾಚಾರ ನಿಗ್ರಹಕ್ಕೆ ಯುವಜನ ಪಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಮಂಗಳೂರು: ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುವುದೂ ಅಸಾಧ್ಯವಲ್ಲ, ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಯುವಕರು ಮನಸ್ಸು ಮಾಡಿದರೆ ಅದನ್ನು ಬಹಳಷ್ಟು ಮಟ್ಟಿಗೆ ತಡೆಯುವುದು ಸಾಧ್ಯ ಎಂಬ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಮಾತಿನಿಂದ ಪ್ರಭಾವಿತರಾದ ನೂರಾರು ಯುವಕರು ಶನಿವಾರ ಇಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಪ್ರಮಾಣವಚನ ಸ್ವೀಕರಿಸಿದರು.

ವಿವೇಕಾನಂದರ 150ನೇ ಜಯಂತ್ಯುತ್ಸವ ಪ್ರಯುಕ್ತ ರಾಮಕೃಷ್ಣ ಮಠ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಯುವ ಜಾಗೃತಿ ಸಮ್ಮೇಳನದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ತಾವು ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ ಸಂತೋಷ್ ಹೆಗ್ಡೆ ಅವರು, ಕೊನೆಯಲ್ಲಿ ಯುವಕರಿಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಪ್ರಮಾಣವಚನ ಬೋಧಿಸಿದರು.

ಈಗಿನ ವ್ಯವಸ್ಥೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ರಾಜಕೀಯ ಪಕ್ಷ ಕಟ್ಟಿ ಮುನ್ನಡೆಯುವುದು ಕಷ್ಟ. ಆದರೂ ವ್ಯವಸ್ಥೆಯಲ್ಲಿನ ಲೋಪಗಳನ್ನು ಕಂಡುಹಿಡಿಯುವ ಮತ್ತು ಶಿಕ್ಷಿಸುವ ಅಧಿಕಾರ ಹೊಂದಿರುವ ಜನಲೋಕಪಾಲದಂತಹ ವ್ಯವಸ್ಥೆಯೊಂದು ಸ್ಥಾಪನೆಯಾಗದ ಹೊರತು ಭ್ರಷ್ಟಾಚಾರಕ್ಕೆ ತಡೆ ಒಡ್ಡುವುದು ಕಷ್ಟಕರ, ಜತೆಗೆ ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ ಎಂದರು.

ಸಮ್ಮೇಳನ ಉದ್ಘಾಟಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಯುವಕರಲ್ಲಿ ಅಪಾರ ಸಾಮರ್ಥ್ಯ ಅಡಗಿದೆ, ಆದರೆ ಅದರ ಅರಿವು ಅವರಿಗೆ ಇಲ್ಲ, ನದಿಯಲ್ಲಿ ನೀರು ಬತ್ತಿದಂತೆ ಕಂಡರೂ ಸ್ವಲ್ಪ ಕೆದಕಿದರೆ ಅಲ್ಲಿ ನೀರು ಸಿಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT