ADVERTISEMENT

ಮಕ್ಕಳ ಅಪಹರಣ ಶಂಕೆ: ಇಬ್ಬರಿಗೆ ಗೂಸಾ

​ಪ್ರಜಾವಾಣಿ ವಾರ್ತೆ
Published 20 ಮೇ 2018, 3:09 IST
Last Updated 20 ಮೇ 2018, 3:09 IST
ಮಕ್ಕಳ ಅಪಹರಣ ಶಂಕೆ: ಇಬ್ಬರಿಗೆ ಗೂಸಾ
ಮಕ್ಕಳ ಅಪಹರಣ ಶಂಕೆ: ಇಬ್ಬರಿಗೆ ಗೂಸಾ   

ವಿಜಾಪುರ: ಶಾಲೆಯ ಸಮೀಪ ಆಟವಾಡುತ್ತಿದ್ದ ನಾಲ್ವರು ಮಕ್ಕಳನ್ನು ಅಪಹರಿಸಿಕೊಂಡು ಹೋಗುತ್ತಿದ್ದರು ಎಂಬ ಸಂಶಯದ ಮೇಲೆ ಇಬ್ಬರನ್ನು  ಗ್ರಾಮಸ್ಥರೇ ಹಿಡಿದು ಕೂಡಿ ಹಾಕಿ, ಮನಬಂದಂತೆ ಥಳಿಸಿದ ಘಟನೆ ತಾಲ್ಲೂಕಿನ ಗುಣಕಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಅಪಹರಣಕ್ಕೊಳಗಾಗಿದ್ದ ಒಬ್ಬ ಬಾಲಕ, ಮೂವರು ಬಾಲಕಿಯರು ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾರೆ.
`ಮಕ್ಕಳನ್ನು ಅಪಹರಿಸಲು ಯತ್ನಿಸಿ ಗ್ರಾಮಸ್ಥರಿಂದ ಹಲ್ಲೆಗೀಡಾಗಿರುವ ಮುದ್ದೇಬಿಹಾಳದ ಅವಟಿ ಗಲ್ಲಿಯ ದಸ್ತಗೀರಸಾಬ ದಾವಲಸಾಬ ಸಂಕನಾಳ (48), ವಿಜಾಪುರ ತಾಲ್ಲೂಕು ದೇವರ ಗೆಣ್ಣೂರ ಗ್ರಾಮದ ಪುಂಡಲೀಕ ಭೀಮಪ್ಪ ಕಾಂದೆಣ್ಣವರ (60) ಅವರನ್ನು ಚಿಕಿತ್ಸೆಗಾಗಿ ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದ್ದಾರೆ.

`ಹಲ್ಲೆಗೊಳಗಾಗಿ ತೀವ್ರ ಅಸ್ವಸ್ಥಗೊಂಡಿರುವ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ. ಆ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ~ ಎಂದು ಅವರು ಹೇಳಿದ್ದಾರೆ.

ಬಂಧಿತರಲ್ಲಿ ದಸ್ತಗೀರಸಾಬ ಎಂಬಾತ ಮುದ್ದೇಬಿಹಾಳದಲ್ಲಿ ಗೋಣಿ ಚೀಲ ಹೊಲಿಯುವ ಕೆಲಸ ಮಾಡುತ್ತಿದ್ದ. ಕಾವಿ ಲುಂಗಿ ಧರಿಸಿ ಸ್ವಾಮಿಯ ವೇಷದಲ್ಲಿರುವ ಪುಂಡಲೀಕ, `ನಾನು ಮಕ್ಕಳನ್ನು ಅಪಹರಿಸಿಲ್ಲ, ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ನನ್ನನ್ನು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ~ ಎಂದು ದೂರುತ್ತಿದ್ದಾನೆ.

ಘಟನೆಯ ವಿವರ: ವಿಜಾಪುರ ತಾಲ್ಲೂಕು ಗುಣಕಿ ಗ್ರಾಮದ ಸಂಗೀತಾ ಸಿದ್ರಾಮ ಬಡಿಗೇರ (12), ಖತಿಜಾ (ಸುಮಯ್ಯ) ಮೌಲಾಲಿ ಹತ್ತರಕಿ (10) ಹಾಗೂ ಈಕೆಯ ಸಹೋದರ ರಫೀಕ ಮೌಲಾಸಾಬ ಹತ್ತರಕಿ (2), ಮಲ್ಲಮ್ಮ (ಪವಕ್ಕ) ಈರಣ್ಣ ಕುಬಕಡ್ಡಿ (6) ಎಂಬ ಮಕ್ಕಳನ್ನು ಈ ಆರೋಪಿಗಳು ಅಪಹರಿಸಿಕೊಂಡು ಹೊರಟಿದ್ದರು ಎಂದು ಗ್ರಾಮದ ಶಿವಾನಂದ ತೀರ್ಥಯ್ಯ ಮಠಪತಿ ದೂರು ನೀಡಿದ್ದಾರೆ.

`ನಿಮ್ಮ ತಂದೆ-ತಾಯಿಯರ ಬಳಿ ಕರೆದೊಯ್ಯುತ್ತೇವೆ~ ಎಂದು ನಂಬಿಸಿ ಈ ಮಕ್ಕಳನ್ನು ಗುಣಕಿ ಗ್ರಾಮದಿಂದ ಅಪಹರಿಸಿ ಅಲ್ಲಿಂದ ಮಿಂಚನಾಳ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದಿದ್ದರು. ಮಿಂಚನಾಳ ರೈಲ್ವೆ ನಿಲ್ದಾಣದಲ್ಲಿದ್ದ ಗುಣಕಿ ಗ್ರಾಮದ ಶಿವಾನಂದ ತೀರ್ಥಯ್ಯ ಮಠಪತಿ ಮತ್ತು ಸಂಜು ಎಂಬುವವರು ಬಾಲಕಿ ಸಂಗೀತಾಳನ್ನು ಗುರುತಿಸಿದ್ದಾರೆ. `ಎಲ್ಲಿಗೆ ಹೋಗುತ್ತಿದ್ದೀರಿ?~ ಎಂದು ಆಕೆಯನ್ನು ವಿಚಾರಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.

ಆ ಬಾಲಕಿ ದಸ್ತಗೀರಸಾಬ ಮತ್ತು ಪುಂಡಲೀಕ ಅವರ ಕಡೆ ಕೈ ಮಾಡಿ `ಇವರು ತಮ್ಮ ತಂದೆ ತಾಯಿಯವರ ಕಡೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ನಮ್ಮನ್ನು ಗುಣಕಿ ಗ್ರಾಮದಿಂದ ಕರೆದುಕೊಂಡು ಹೊರಟಿದ್ದಾರೆ~ ಎಂದು ಹೇಳಿದಳು. ಸಂಶಯಗೊಂಡ ಶಿವು ಮತ್ತು ಸಂಜು ಅವರು ಈ ಆರೋಪಿಗಳನ್ನು ಹಿಡಿದುಕೊಂಡು ಅವರನ್ನು ಹಾಗೂ ಮಕ್ಕಳನ್ನು ವಾಪಸ್ಸು ಕರೆತಂದರು.

ಗ್ರಾಮಸ್ಥರು ಈ ಇಬ್ಬರು ಆರೋಪಿಗಳನ್ನು ಥಳಿಸಿ ಶಾಲೆಯಲ್ಲಿ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಗ್ರಾಮಕ್ಕೆ ತೆರಳಿ ಆರೋಪಿಗಳನ್ನು ವಿಜಾಪುರಕ್ಕೆ ಕರೆ ತಂದಿದ್ದಾಗಿ ಪ್ರಭಾರ ಎಸ್ಪಿ ತಿಳಿಸಿದ್ದಾರೆ.
`ಬಂಧಿತರ ಬಳಿ ನಿಂಬೆ ಹಣ್ಣು, ಚಾಕು, ಕವಡಿ, ಮತ್ತು ಬರಿಸುವ ಪದಾರ್ಥಗಳು ದೊರೆತಿವೆ.

ಮಕ್ಕಳನ್ನು ಅಪಹರಿಸುವ ದೊಡ್ಡ ಗ್ಯಾಂಗ್ ಇರಬಹುದು. ಇವರು ಮಕ್ಕಳನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು, ಅಲ್ಲಿಂದ ರೈಲ್ವೆಯಲ್ಲಿ ಬರುವ ಆ ಗ್ಯಾಂಗಿನ ಸದಸ್ಯರಿಗೆ ಮಕ್ಕಳನ್ನು ಒಪ್ಪಿಸುವ ತಂಡ ಇದಾಗಿರಬಹುದು~ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಕ್ಕಳ ಅಪಹರಣ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.