ADVERTISEMENT

ಮಗನ ನೋಡಿ ಹೋದಾವ, ಹೆಣವಾಗಿ ಬಂದಾನ...

ಗೋವಾ ದುರಂತ: ಹಿರೇಹಡಗಲಿಯ ಇಬ್ಬರು ಬಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:32 IST
Last Updated 5 ಜನವರಿ 2014, 19:32 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ‘ಹುಟ್ಟಿದ ಕೂಸಿನ  ಮಾರಿ ನೋಡಿ ಹೋದಾವ ಹೆಣವಾಗಿ ಬರಾಕತ್ತ್ಯಾನ. ಹಿರೀಕ (ಹಿರಿಯ) ಹೋದಮ್ಯಾಲ ನಮಗ್ಯಾರು ದಿಕ್ಕು... ಬಡವ್ರಿಗೆ ವಿಧಿ ಇಷ್ಟು ಮೋಸ ಮಾಡ್ಬಾರ್ದು ರೀ ಯಪ್ಪಾ...!’

ಗೋವಾದ ಕಾಣಕೋಣ ಪಟ್ಟಣದಲ್ಲಿ ಕುಸಿದಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಅವಶೇಷಗಳಡಿ ಸಿಲುಕಿ ಸಾವಿಗೀಡಾಗಿರುವ ಬಂಗಾರಿ ಉದಯ ಅವರ ತಾಯಿ ಲಲಿತಮ್ಮ ರೋದನ ಎಲ್ಲರ ಮನ ಕಲಕುತ್ತಿತ್ತು.

ಗೋವಾ ಪಟ್ಟಣಕ್ಕೆ ದುಡಿಯಲು ವಲಸೆ ಹೋಗಿರುವ ಬಂಗಾರಿ ಉದಯ (32), ಬಳಿಗಾರ ಜಬೀವುಲ್ಲಾ (20) ಕಟ್ಟಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಬರುತ್ತಿದ್ದಂತೆ ಹಿರೇಹಡಗಲಿಯಲ್ಲಿ ನೀರವ ವಾತಾವರಣ ಕಂಡು ಬಂತು.

ಕಟ್ಟಡ ದುರಂತದಲ್ಲಿ ಸಾವಿಗೀಡಾಗಿರುವ  ಬಂಗಾರಿ ಉದಯನಿಗೆ  ಊರಲ್ಲಿ  ಹೊಲ, ಸ್ವಂತ ಮನೆ ಇಲ್ಲ. ಕುಟುಂಬದ ಜವಾಬ್ದಾರಿಯ ಜತೆಗೆ ಇಬ್ಬರು ತಂಗಿಯರ ಮದುವೆ ಸಾಲ ಈತನ ಹೆಗಲೇರಿತ್ತು. ಕೂಲಿಯೇ ಜೀವನಕ್ಕೆ ಆಧಾರವಾ­ಗಿದ್ದು, ದುಡಿಮೆಗಾಗಿ ಗೆಳೆಯರ ಜತೆ ಗೋವಾ ರಾಜ್ಯಕ್ಕೆ ಹೋಗುತ್ತಿದ್ದರು. ತಿಂಗಳ ಹಿಂದೆ ಜನಿಸಿದ ಎರಡನೇ ಮಗು ನೋಡಲು ಊರಿಗೆ ಬಂದು ವಾಪಸ್ ಹೋಗಿದ್ದರು.
ಕಡುಬಡತನದ ನಡುವೆ ವಿದ್ಯಾಭ್ಯಾಸ  ಮುಂದುವರೆಸಲಾಗದೆ  ಸ್ನೇಹಿತರೊಂದಿಗೆ ದುಡಿ­ಯಲು ಹೋಗಿದ್ದ ಬಳಿಗಾರ ಜಬೀವುಲ್ಲಾ ಕೂಡ  ಸಾವಿಗೀಡಾಗಿದ್ದಾನೆ. ತಾನು ದುಡಿದು ಕುಟುಂಬಕ್ಕೆ ಆಧಾರವಾಗುವ  ಜಬಿವುಲ್ಲಾನ  ಕನಸುಗಳು ಕಟ್ಟಡಗಳ ಅವಶೇಷಗಳಡಿಯಲ್ಲಿ ಕಮರಿ ಹೋಗಿವೆ.

ಗೋವಾ ಕಟ್ಟಡ ದುರಂತದಲ್ಲಿ ಮೃತ­ಪ­ಟ್ಟಿ­ರುವ ರಾಜ್ಯದ ಕಾರ್ಮಿಕರ ಕುಟುಂಬ­ಗಳಿಗೆ ನಿಯಮಾನುಸಾರ ಪರಿಹಾರ ನೀಡುವುದಾಗಿ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭರವಸೆ ನೀಡಿದರು.

ಪರಿಹಾರದ ಭರವಸೆ: ರಾಜ್ಯ  ಸರ್ಕಾರದ ಮುಖ್ಯ ಕಾರ್ಯದ­ರ್ಶಿ­ಗಳ ಮೂಲಕ ಗೋವಾ ಸರ್ಕಾರ­ದೊಂದಿಗೆ ಸಂಪರ್ಕ ಹೊಂದಿದ್ದು, ಮೃತ­­­
ದೇಹ­ಗಳ ಹಸ್ತಾಂತರ ಮತ್ತು ಗಾಯಾಳು­ಗಳ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ.

ಈ ಕುರಿತು ಮುಖ್ಯಮಂತ್ರಿ­ಗಳ ಜೊತೆ ಚರ್ಚಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದರು.

ಇನ್ನೊಂದು ಸುದ್ದಿ...
*ಮೃತರ ಸಂಖ್ಯೆ 15ಕ್ಕೆ ಏರಿಕೆ: ಗುತ್ತಿಗೆದಾರನಿಗೆ ಶೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.