ADVERTISEMENT

ಮಠಗಳಿಗೆ ಅನುದಾನ ಹೈಕೋರ್ಟ್‌ನಲ್ಲಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾ ಮಠ ಸೇರಿದಂತೆ ರಾಜ್ಯದ 13 ಲಿಂಗಾಯತ ಮಠಗಳಿಗೆ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಉಪ ಪ್ರಧಾನ ಸಂಚಾಲಕ ಎಚ್. ಮಾರಪ್ಪ ಮತ್ತು ಇತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದೆ.

ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಠಗಳಿಗೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸಂವಿಧಾನದ ಜಾತ್ಯತೀತ ಮತ್ತು ಸಮಾಜವಾದಿ ಆಶಯಗಳ ಉಲ್ಲಂಘನೆ. ಸಂವಿಧಾನದ 26(ಬಿ) ವಿಧಿಯ ಅನ್ವಯ ಸರ್ಕಾರವು ಯಾವುದೇ ಧಾರ್ಮಿಕ ಸಂಸ್ಥೆಯ ಮೇಲೆ ಹಣ ಅಥವಾ ಇನ್ನಿತರ ಪ್ರಭಾವ ಬೀರುವಂತಿಲ್ಲ. ಆದರೆ ಅನುದಾನ ಬಿಡುಗಡೆ ಮಾಡುವ ಮೂಲಕ ಸರ್ಕಾರ ಇದನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮಠಗಳಿಗೆ ನೀಡಿರುವ ಅನುದಾನ ರದ್ದು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅರ್ಜಿಯು ವಿಚಾರಣೆ ಹಂತದಲ್ಲಿರುವಾಗ, ಮಠಗಳಿಗೆ ಹಣ ಬಿಡುಗಡೆ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಲಾಗಿದೆ. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.