ADVERTISEMENT

ಮಠಗಳಿಗೆ ಹಣ ಕೊಟ್ಟರೆ ತಪ್ಪೇನು?- ಕಾಂಗ್ರೆಸ್ ಶಾಸಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:45 IST
Last Updated 12 ಫೆಬ್ರುವರಿ 2012, 19:45 IST

ಹೊಳಲ್ಕೆರೆ(ಚಿತ್ರದುರ್ಗ ಜಿಲ್ಲೆ): ಸರ್ಕಾರ ಮಠಗಳಿಗೆ ಹಣ ನೀಡುವುದು ತಪ್ಪಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ  ಟಿ.ಬಿ. ಜಯಚಂದ್ರ ಹೇಳಿದರು.

ತಾಲ್ಲೂಕಿನ ಈಚಗಟ್ಟದಲ್ಲಿ ಭಾನುವಾರ 23ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಮಠಗಳಿಗೆ ಹಣ ನೀಡುವುದರ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಮಠಗಳು ಬಡ ಮಕ್ಕಳಿಗೆ ಶಾಲಾ ಕಾಲೇಜು, ಹಾಸ್ಟೆಲ್ ತೆರೆದು ವಿದ್ಯಾಭ್ಯಾಸ ನೀಡುವುದಾದರೆ ಹಣ ಕೊಡುವುದರಲ್ಲಿ ತಪ್ಪಿಲ್ಲ. ಸರ್ಕಾರದ ಹಣದಲ್ಲಿ ಗುಡಿ ಗೋಪುರಗಳನ್ನು ಕಟ್ಟುವುದು ಬೇಡ. ನೊಂದವರಿಗೆ, ದುರ್ಬಲರಿಗೆ ಉಪಯೋಗವಾಗುವಂತಹ ಸಮಾಜಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ ನೀಡಿದ್ದು, ಅವರನ್ನು ಸಮಾಜದ ಮುಖಂಡನಾಗಿ ಅಭಿನಂದಿಸುತ್ತೇನೆ. ಈ ಹಣದೊಂದಿಗೆ ಸಮಾಜ ಬಾಂಧವರು ಇನ್ನೂ ರೂ. 2 ಕೋಟಿ ಹಣ ಸಂಗ್ರಹಿಸಿ ಮಠವನ್ನು ಬಲಪಡಿಸಬೇಕು ಎಂದರು.

900 ವರ್ಷಗಳ ಇತಿಹಾಸವಿರುವ ಕುಂಚಿಟಿಗ ಸಮಾಜ ಹರಿದು ಹಂಚಿ ಹೋಗಿದೆ. ಒಳಜಗಳ, ಪ್ರತಿಷ್ಠೆ, ಅಸಹಕಾರದಿಂದಾಗಿ ಸಮಾಜದ ಏಳಿಗೆಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕನಿಷ್ಠ 15 ಕುಂಚಿಟಿಗ ಶಾಸಕರ ಆಯ್ಕೆ ಮಾಡುವ ಶಕ್ತಿ ಇದ್ದರೂ, ಸಂಘಟನೆಯ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಈ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಅವರಿಗೆ ಸಚಿವ ಸ್ಥಾನ ಕೊಡುವ ಮೂಲಕ ಮುಖ್ಯಮಂತ್ರಿ ಅವರು ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕು ಎಂದರು.

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.