ADVERTISEMENT

ಮಡೆ ಸ್ನಾನ: ಸುಪ್ರೀಂ ತೀರ್ಪಿನ ನಂತರ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು: ಮಡೆ ಮಡೆ ಸ್ನಾನದ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಅದನ್ನು ಕಂಡೂಕಾಣದಂತೆ ಇರಬೇಕಾಗಿದೆ. ಸುಪ್ರೀಂಕೋರ್ಟ್‌ ಆದೇಶ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಶನಿವಾರ ಇಲ್ಲಿ ತಿಳಿಸಿದರು.

ಇದೊಂದು ಅನಾಗರಿಕ ಪದ್ಧತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಂದ್ರನ ಮೇಲೆ ಕಾಲು ಇಟ್ಟು, ಮಂಗಳ ಗ್ರಹಕ್ಕೆ ಹೋಗುತ್ತಿರುವ ಸ್ಪರ್ಧಾ ಪ್ರಪಂಚದಲ್ಲಿ ಇಂತಹ ಅನಿಷ್ಟ ಪದ್ಧತಿ ಆಚರಣೆಯಲ್ಲಿ ಇರುವುದು ಎಲ್ಲರಿಗೂ ಬೇಸರ. ಆದರೆ, ಜನರ ಭಾವನೆಗಳನ್ನು ಎಕೆ–47 ಬಂದೂಕು ತೋರಿಸಿ ಬದಲಿಸಲು ಸಾಧ್ಯ ಇಲ್ಲ. ಮಠಾಧೀಶರು, ವಿಚಾರವಾದಿಗಳು, ಸ್ವಯಂಸೇವಾ ಸಂಸ್ಥೆಗಳೇ ಈ ನಿಟ್ಟಿನಲ್ಲಿ ಜನರ ಮನಸ್ಸನ್ನು ಬದಲಿಸುವ ಕೆಲಸ ಮಾಡಬೇಕು. ಕಾನೂನು ಮೂಲಕ ಇಂತಹ ವಿಚಾರಗಳನ್ನು ದಮನ ಮಾಡುವುದು ಕಷ್ಟ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟಿ.ವಿ ಮಾಧ್ಯಮಗಳು ಕೂಡ ಇಂತಹ ಅನಿಷ್ಟ ಪದ್ಧತಿಗಳಿಗೆ ಹೆಚ್ಚು ಪ್ರಚಾರ ನೀಡಬಾರದು. ಟಿ.ವಿ.ಗಳಲ್ಲಿ ಗಂಟೆಗಟ್ಟಲೆ ಎಂಜಲು ಎಲೆ ಮೇಲೆ ಜನ ಉರುಳಾಡುವುದನ್ನು ತೋರಿಸುತ್ತಾರೆ. ಇದು ಒಂದು ರೀತಿ ಜನರನ್ನು ಪ್ರೇರೇಪಿಸುತ್ತದೆ. ಇಂತಹ ಸಂಗತಿಗಳನ್ನು ಟಿ.ವಿ. ಮಾಧ್ಯಮ ಕೂಡ ನಿರ್ಲಕ್ಷ್ಯ ಮಾಡಬೇಕು ಎಂದು ಅವರು ಹೇಳಿದರು.

ಮಡೆ ಸ್ನಾನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಜತೆಗೂ ಮಾತನಾಡಿದ್ದು, ಆದಷ್ಟು ಜನರ ಮನಃ ಪರಿವರ್ತಿಸಲು ಪ್ರಯತ್ನಿಸಿ ಎನ್ನುವ ಸಲಹೆ ನೀಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ವರ್ಷ ಜಾರಿ:
ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಸದ್ವಿನಿಯೋಗಿಸದ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವ ಮಸೂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಅದು ಜಾರಿಗೆ ಬರಲಿದೆ ಎಂದು ಆಂಜನೇಯ ತಿಳಿಸಿದರು. ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ಸಿಕ್ಕ ತಕ್ಷಣ ನಿಯಮಗಳನ್ನು ರೂಪಿಸಲಾಗುವುದು ಎಂದರು.

ರಕ್ತದಾನ: ಅಂಬೇಡ್ಕರ್ ಮಹಾ ಪರಿನಿರ್ವಾಣದ ದಿನದಂದು ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ೧೭ ಜಿಲ್ಲೆಗಳಲ್ಲಿ ಒಟ್ಟು ೫೬೭ ದಾನಿಗಳು  ರಕ್ತದಾನ ಮಾಡಿದ್ದಾರೆ. ಆ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  ಮುಂದಿನ ವರ್ಷ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಮತ್ತಷ್ಟು ಯಶಸ್ವಿಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.