ADVERTISEMENT

ಮತದಾರರಲ್ಲಿ ಚುನಾವಣಾ ಜಾಗೃತಿ: `ಪ್ರಜಾವಾಣಿ'ಗೆ ಮೊದಲ ಬಹುಮಾನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ಬಳ್ಳಾರಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ವಿಶೇಷ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಕರ್ಷಕ ಘೋಷವಾಕ್ಯಗಳನ್ನು ಪ್ರಕಟಿಸಿದ `ಪ್ರಜಾವಾಣಿ' ಪತ್ರಿಕೆಗೆ ಮೊದಲ ಬಹುಮಾನ ಲಭಿಸಿದೆ.

ಜಿಲ್ಲಾಡಳಿತ ಹಾಗೂ ಮತದಾರರ ವ್ಯವಸ್ಥಿತ ಜಾಗೃತಿ ಹಾಗೂ ಚುನಾವಣಾ ಕಾರ್ಯಕ್ರಮ (ಸ್ವೀಪ್) ಸಮಿತಿ ಏರ್ಪಡಿಸಿದ್ದ ಘೋಷವಾಕ್ಯ ಪ್ರಕಟಣೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ `ಪ್ರಜಾವಾಣಿ'ಗೆ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ರೂ 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು. ಜಿಲ್ಲಾ ವರದಿಗಾರ ಸಿದ್ದಯ್ಯ ಹಿರೇಮಠ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕನ್ನಡದ ಪಬ್ಲಿಕ್- ಟಿವಿ ಸುದ್ದಿ ವಾಹಿನಿಯು ದ್ವಿತೀಯ ಸ್ಥಾನ (ರೂ5 ಸಾವಿರ ನಗದು), ತೆಲುಗಿನ `ಆಂಧ್ರಜ್ಯೋತಿ' ಪತ್ರಿಕೆಯು ತೃತೀಯ ಸ್ಥಾನ (ರೂ2500 ನಗದು) ಗಳಿಸಿದರೆ, ಇತರ ಕನ್ನಡ ಪತ್ರಿಕೆಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

`ಕಳೆದ ಮೇ 5ರಂದು ನಡೆದಿದ್ದ ಚುನಾವಣೆಗೆ ಮುನ್ನ ಪತ್ರಿಕಾ ಮಾಧ್ಯಮಗಳು ವಿಶೇಷ ಆಸಕ್ತಿಯಿಂದ ಪ್ರಕಟಿಸಿದ ಜಾಗೃತಿ ಮೂಡಿಸುವ ವರದಿಗಳು ಮತ್ತು ಘೋಷವಾಕ್ಯಗಳಿಂದಾಗಿ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2008ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 66.66ರಷ್ಟಾಗಿದ್ದ ಮತದಾನದ ಪ್ರಮಾಣ ಈ ಬಾರಿ ಶೇ 73.63ರಷ್ಟಾಗಿದೆ' ಎಂದು ಪ್ರಶಸ್ತಿ ಪ್ರದಾನ ಮಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.

ವಿಶೇಷವಾಗಿ ಅತಿ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದ್ದ ನಗರ ಪ್ರದೇಶಗಳ ಮತದಾನ ಪ್ರಮಾಣ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಳ ಆಗಿರುವುದರಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿತ್ತು ಎಂದು ಅವರು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಮಹೇಶ್ವರಯ್ಯ, ನಂದೀಶ,  ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮುಖ್ಯ ಲೆಕ್ಕಾಧಿಕಾರಿ ಚೆನ್ನಪ್ಪ, ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಎಸ್. ಕಲಾದಗಿ, ಕ್ರೀಡಾಧಿಕಾರಿ ರಾಜು ಭಾವಿಹಳ್ಳಿ ಹಾಗೂ ಪತ್ರಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.