ADVERTISEMENT

ಮತ್ತೆ ಶುರುವಾಯ್ತು ಕೃಷ್ಣಮೃಗಗಳ ಕಾಟ

ಹಾವೇರಿ: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವನ್ಯಜೀವಿಗಳ ಸಂತತಿ

ಹರ್ಷವರ್ಧನ ಪಿ.ಆರ್.
Published 17 ಜೂನ್ 2018, 17:01 IST
Last Updated 17 ಜೂನ್ 2018, 17:01 IST
ಹಾವೇರಿ ತಾಲ್ಲೂಕಿನ ನಾಗನೂರಿನ ಬಳಿಯ ಹೊಲವೊಂದರಲ್ಲಿ ರೈತರನ್ನು ಕಂಡೊಡನೆಯೇ ಜಿಗಿದು ಓಡಿದ ಕೃಷ್ಣಮೃಗಗಳು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಹಾವೇರಿ ತಾಲ್ಲೂಕಿನ ನಾಗನೂರಿನ ಬಳಿಯ ಹೊಲವೊಂದರಲ್ಲಿ ರೈತರನ್ನು ಕಂಡೊಡನೆಯೇ ಜಿಗಿದು ಓಡಿದ ಕೃಷ್ಣಮೃಗಗಳು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ: ಜಿಲ್ಲೆಯ ರೈತರನ್ನು ಕೃಷ್ಣಮೃಗಗಳು ಹೈರಾಣು ಮಾಡುತ್ತಿವೆ. ಹೊಲದಲ್ಲಿ ಬಿತ್ತಿದ ಬೀಜ ಈಗಷ್ಟೇ ಚಿಗುರೊಡೆದಿದ್ದು, ಅದನ್ನೆಲ್ಲ ತಿಂದು ಹಾಕುತ್ತಿವೆ. ಅಲ್ಲದೇ ಅಡ್ಡಾದಿಡ್ಡಿ ಓಡಾಡಿ ಹೊಲಕ್ಕೂ ಹಾನಿ ಮಾಡುತ್ತಿವೆ.

ಅಳಿವಿನಂಚಿನಲ್ಲಿರುವ ಜೀವಿಗಳ ಪೈಕಿ ಗುರುತಿಸಲಾದ ಕೃಷ್ಣಮೃಗವು (black buck), ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೆ ಒಳಪಟ್ಟಿದ್ದು, ಜಿಲ್ಲೆಯಲ್ಲಿ ಇವುಗಳ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು ಇದೆ. ಹಾನಿಗೆ ಪರಿಹಾರ ಕೋರಿ, ಪ್ರತಿ ವರ್ಷ ಅಂದಾಜು ಸಾವಿರ ರೈತರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ!

ಸಂಘಜೀವಿಗಳಾಗಿರುವ ಇವು ಹಿಂಡು ಹಿಂಡಾಗಿಯೇ ಹೊಲಕ್ಕೆ ದಾಳಿ ಇಡುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ಪ್ರತಿ ಹಿಂಡಿನಲ್ಲಿ 20ರಿಂದ 40 ಹೆಣ್ಣು ಕೃಷ್ಣಮೃಗಗಳು ಇರುವು‌ದರಿಂದ ಅವುಗಳನ್ನು ಓಡಿಸಲು ರೈತರು ನಾನಾ ಕಸರತ್ತುಗಳನ್ನು ನಡೆಸುತ್ತಾರೆ.

ADVERTISEMENT

‘ಗುಡಿಸಲು ಹಾಕಿ, ಬೆದರು ಗೊಂಬೆ ನಿಲ್ಲಿಸಿ, ಶಬ್ದ ಮಾಡುವ ಡಬ್ಬ ಕಟ್ಟಿ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತೇವೆ. ಆದರೂ, ಅವು ಬೆಳಿಗ್ಗೆ ಹಾಗೂ ಸಂಜೆ ಹಾಜರಾಗಿಯೇ ಬಿಡುತ್ತವೆ’ ಎನ್ನುತ್ತಾರೆ ನಾಗನೂರಿನ ರೈತ ನಾಗಪ್ಪ ಪಡಶೆಟ್ಟಿ. ಈ ಬಾರಿ ಮೆಕ್ಕೆಜೋಳ, ಹತ್ತಿ,  ಹೆಸರು, ಶೇಂಗಾ ಬಿತ್ತನೆ ಮಾಡಲಾಗಿದೆ. ಕೆಲವೆಡೆ ತರಕಾರಿ ಮತ್ತಿತರ ತೋಟಗಾರಿಕಾ ಬೆಳೆಗಳ ಬಿತ್ತನೆ, ನಾಟಿ ನಡೆದಿದೆ. ಇಲ್ಲೆಲ್ಲ ಬರುವ ಕೃಷ್ಣಮೃಗಗಳು ಕೆಲವೇ ಗಂಟೆಗಳಲ್ಲಿ ಇಡೀ ಹೊಲದ ಬೆಳೆಗಳ ಚಿಗುರನ್ನು ತಿಂದು ಹಾಕುತ್ತಿವೆ. ಕೆಲವು ಹೊಲದಂಚಿನಲ್ಲೇ ಬೀಡುಬಿಟ್ಟಿವೆ. ಇವುಗಳ ಜೊತೆಗೆ ನವಿಲು, ಮಂಗ ಹಾಗೂ ಹಂದಿಗಳೂ ಹೊಲಕ್ಕೆ ನುಗ್ಗುತ್ತಿದ್ದು, ರೈತರನ್ನು ಚಿಂತೆಗೆ ದೂಡಿದೆ.

‘ಒಂದೊಂದು ಸಸಿ, ಮೊಳಕೆಗೆ ಹಾನಿಯಾದರೂ ನಾವು ‘ಸಾಗುಣಿ’ (ಸಾಲುಗಳ ಮಧ್ಯೆ ಮರು ಬಿತ್ತನೆ) ಮಾಡುತ್ತೇವೆ. ಪೂರ್ತಿ ಹೊಲವೇ ಹಾನಿಯಾದರೆ ಏನು ಮಾಡುವುದು?’ ಎಂದು ಕುಣಿಮೆಳ್ಳಿಹಳ್ಳಿಯ ಚಂದ್ರು ಆಡೂರ ಅಸಹಾಯಕತೆವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೃಷ್ಣಮೃಗ ಮತ್ತು ಹಂದಿ ಕಾಟದಿಂದ ಪ್ರತಿ ವರ್ಷವೂ ಹಾನಿಯಾಗುತ್ತಿದ್ದು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ಮೈಸೂರು ಭಾಗದಲ್ಲಿ ಆನೆ ಕಾಟ ನಿಭಾಯಿಸಲು ಕೋಟಿಗಟ್ಟಲೆ ಖರ್ಚು ಮಾಡಿ ಬೇಲಿ, ಟ್ರೆಂಚ್ ಹಾಕುತ್ತಾರೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳ ಬಗ್ಗೆ ತಾರತಮ್ಯ ಏಕೆ ಎಂಬುದು ಅವರ ಪ್ರಶ್ನೆ.

ಕೆಲವು ಅಧಿಕಾರಿಗಳು ಸೌರಶಕ್ತಿ ವಿದ್ಯುತ್ ಬೇಲಿ ಹಾಕುವಂತೆ ಸಲಹೆ ನೀಡುತ್ತಾರೆ. ಇದಕ್ಕೆ ರೈತರು ಎಲ್ಲಿಂದ ಹಣ ತರಬೇಕು? ಎಂದು ವಕೀಲ ನಾರಾಯಣ ಕಾಳೆ ಪ್ರಶ್ನಿಸುತ್ತಾರೆ.

‘ಸೌರಶಕ್ತಿ ವಿದ್ಯುತ್ ಬೇಲಿಯ ಮೂಲಕ ಆನೆಯ ಹಾವಳಿ ನಿಯಂತ್ರಿಸಬಹುದು. ಆದರೆ, ಕೃಷ್ಣಮೃಗ ಹಾಗೂ ಜಿಂಕೆಗಳು ಕೊಂಬುಗಳನ್ನು ಬಳಸಿಕೊಂಡು ಬೇಲಿಯನ್ನು ಹಾದು ಬರುತ್ತವೆ. ಪರ್ಯಾಯ ಕ್ರಮದ ಬಗ್ಗೆ ಚಿಂತನೆ ನಡೆಸುತ್ತಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಎಚ್‌.ಸಿ.

ಮುಖ್ಯಾಂಶಗಳು

* ಚಿಗುರಿಗೇ ಬಾಯಿಹಾಕುವ ಕೃಷ್ಣಮೃಗ ಹಿಂಡು

* ವನ್ಯಮೃಗಗಳನ್ನು ಓಡಿಸಲು ರೈತರ ಹರಸಾಹಸ

* ಪರಿಹಾರಕ್ಕಾಗಿ ಪ್ರತಿವರ್ಷ ಸಾವಿರ ಅರ್ಜಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.