ADVERTISEMENT

ಮತ್ತೆ ಸಂಪರ್ಕ ಕ್ರಾಂತಿಗೆ ಕಿತ್ತೂರು ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST
ಮತ್ತೆ ಸಂಪರ್ಕ ಕ್ರಾಂತಿಗೆ ಕಿತ್ತೂರು ಸಾಕ್ಷಿ
ಮತ್ತೆ ಸಂಪರ್ಕ ಕ್ರಾಂತಿಗೆ ಕಿತ್ತೂರು ಸಾಕ್ಷಿ   

ಚನ್ನಮ್ಮನ ಕಿತ್ತೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮೊಟ್ಟಮೊದಲ ~ಕ್ರಾಂತಿಯ ಕಿಡಿ~ ಹೊತ್ತಿಸಿದ ಕಿತ್ತೂರು,  ಭಾರತೀಯ ದೂರಸಂಪರ್ಕ ಜಾಲದ ಮತ್ತೊಂದು ಮಹತ್ತರ ಕ್ರಾಂತಿಗೆ ಮಂಗಳವಾರ ಸಾಕ್ಷಿಯಾಯಿತು.

ದೆಹಲಿ, ಬೆಂಗಳೂರು ಹಾಗೂ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಭಾರತದ ದೂರಸಂಪರ್ಕ ಕ್ರಾಂತಿಯ 25ನೇ ವರ್ಷಾಚರಣೆ ಹಾಗೂ ಭವಿಷ್ಯದ ಪೀಳಿಗೆಯ ಅಂತರ್‌ಜಾಲ (ಎನ್‌ಜಿಎನ್)ಸೇವೆಯನ್ನು `ಮ್ಯಾಕ್ಸ್ ಎನ್‌ಜಿ~ಗೆ ಉನ್ನತಿಗೊಳಿಸಿದ ಉದ್ಘಾಟನೆ ಕಾರ್ಯಕ್ರಮವನ್ನು ಇದೇ ಎನ್‌ಜಿಎನ್ ಸೌಕರ್ಯದ ಮೂಲಕ ದೇಶದ ಆಯ್ದ ಜನರು ಏಕಕಾಲದಲ್ಲಿ ವೀಕ್ಷಿಸಿದರು.

ಕಾಲು ಶತಮಾನದ ಹಿಂದೆಯೇ ಅಂದರೆ 1986 ಜುಲೈ ತಿಂಗಳಲ್ಲಿ ಗ್ರಾಮಾಂತರ ಪ್ರದೇಶವಾದ ಕಿತ್ತೂರಿನಿಂದ ದೇಶ, ವಿದೇಶಗಳಿಗೆ ನೇರ ಸಂಪರ್ಕ ಕಲ್ಪಿಸುವ `ಸಿ-ಡಾಟ್~ ರ‌್ಯಾಕ್ ಅನುಷ್ಠಾನವಾಗಿತ್ತು.

ಇದು ಗ್ರಾಮೀಣ ಪ್ರದೇಶದ ಮೊಟ್ಟ ಮೊದಲ `ಸಿ-ಡಾಟ್~ ಕೇಂದ್ರವಾಗಿತ್ತು. ದೂರಸಂಪರ್ಕ ಕ್ರಾಂತಿಯ ಈ ಇಪ್ಪತ್ತೈದು ವರ್ಷಗಳ ಪಯಣದ ನಂತರ ಈ ಮೊದಲಿದ್ದ ಎನ್‌ಜಿಎನ್ ಸೇವೆಯನ್ನು ಮ್ಯಾಕ್ಸ್ ಎನ್‌ಜಿಗೆ ಉನ್ನತಿಕರಣಗೊಳಿಸುವ ಮತ್ತೊಂದು ಸಂಪರ್ಕ ಕ್ರಾಂತಿ ಈಗ ಆಗಿದೆ.

ಮೊದಲು ನಡೆದ ಸಿ-ಡಾಟ್ ತಂತ್ರಜ್ಞಾನದಿಂದ ಕೇವಲ ಧ್ವನಿಯನ್ನು ಪರಸ್ಪರ ಆಲಿಸಬಹುದಾಗಿತ್ತು. ಮ್ಯಾಕ್ಸ್-ಎನ್‌ಜಿ ಉನ್ನತಿಕರಣದಿಂದ ಧ್ವನಿ, ಚಿತ್ರ ಹಾಗೂ ದತ್ತಾಂಶಗಳ (ಡಾಟಾ ಬೇಸ್) ಸೇವೆ ಪಡೆಯಬಹುದಾಗಿದೆ~ ಎಂದು ಸಿ-ಡಾಟ್ ನಿರ್ದೇಶಕ ಜಯಂತ್ ಭಟ್ನಾಗರ ತಿಳಿಸಿದರು.

ಸಿ-ಡಾಟ್ ಸಂಸ್ಥಾಪಕ ನಿರ್ದೇಶಕ ಡಾ. ಎಂ. ವಿ. ಪಿಟ್ಕೆ ಈ ಕಾರ್ಯಕ್ರಮ ಉದ್ಘಾಟಿಸಿ, ಇಪ್ಪತ್ತೈದು ವರ್ಷಗಳ ದೂರಸಂಪರ್ಕದ ಪ್ರಗತಿಪಥವನ್ನೊಮ್ಮೆ ಅವಲೋಕನ ಮಾಡಿದರು.

~ಸಿ-ಡಾಟ್‌ಗಳ ಗುರಿ ಈಡೇರಿದ ನಂತರ ದೇಶಿ ದೂರ ಸಂಪರ್ಕ ಕ್ಷೇತ್ರದಲ್ಲಿ ನಿಯಂತ್ರಣ ಹಾಗೂ  ತಾಂತ್ರಿಕ ಕ್ರಾಂತಿಯಾಗುತ್ತಿದೆ. ಡಾಟಾ ಆಪ್ಟಿಕಲ್ ಫೈಬರ್ ಟ್ರಾನ್ಸ್‌ಮಿಷನ್,ಇಕ್ವಿಪ್‌ಮೆಂಟ್, ವಿ-ಸ್ಯಾಟ್ ಇಕ್ವಿಪ್‌ಮೆಂಟ್, ಐಎಸ್‌ಡಿಎನ್‌ಗೆ ಸ್ವಿಚ್‌ಗಳ ಉನ್ನತಿಕರಣ, ಇಂಟೆಲಿಜೆಂಟ್ ನೆಟ್‌ವರ್ಕಿಂಗ್, ಮೊಬೈಲ್ ಸ್ವಿಚಿಂಗ್ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಸಿ-ಡಾಟ್ ಸೇವೆ ಗುಣಮಟ್ಟ ಮತ್ತು ಸಾಧನೆ ಅನುಪಾತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿದೆ~ ಎಂದು ಅಭಿಪ್ರಾಯಪಟ್ಟರು.

ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ಪ್ರಧಾನಮಂತ್ರಿ ಸಲಹೆಗಾರ ಸ್ಯಾಮ್ ಪಿತ್ರೋಡಾ, ಸಿ-ಡಾಟ್ ನಿರ್ವಾಹಕ ನಿರ್ದೇಶಕ ವಿ. ವಿ. ಶಾಸ್ತ್ರಿ ದೆಹಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು `ಸಿ-ಡಾಟ್~ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ದೆಹಲಿ, ಬೆಂಗಳೂರು ಮತ್ತು ಕಿತ್ತೂರಲ್ಲಿ ನಡೆದ ಈ ಮೂರು ಕಾರ್ಯಕ್ರಮಗಳು ಏಕಕಾಲದಲ್ಲಿ ನೇರ ಪ್ರಸಾರವಾದವು.

ಚಪ್ಪಾಳೆ ಸುರಿಮಳೆ: ದೆಹಲಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸ್ಯಾಮ್ ಪಿತ್ರೋಡಾ ಹಾಗೂ ಇತರ ಭಾಷಣಕಾರರು ಕಿತ್ತೂರು ಹೆಸರನ್ನು ಪ್ರಸ್ತಾಪಿಸಿದಾಗಲೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಸಭಿಕರು ಚಪ್ಪಾಳೆ ತಟ್ಟಿ ಖುಷಿಪಟ್ಟರು. ದೆಹಲಿ, ಬೆಂಗಳೂರು ಹಾಗೂ ಕಿತ್ತೂರಲ್ಲಿ ನಡೆದ ಕಾರ್ಯಕ್ರಮದ ವಿವರಗಳನ್ನು ಏಕಕಾಲದಲ್ಲಿ ನೇರಸಂಪರ್ಕ ಸಾಧನ ಮೂಲಕ ವೀಕ್ಷಿಸುವ ಸೌಲಭ್ಯವನ್ನು ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಸಭಾಭವನದಲ್ಲಿ ಮಾಡಲಾಗಿತ್ತು. ರಾಜಗುರು ಮಡಿವಾಳರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿದರು.

ಅಂದು ತಂದೆ: ಇಂದು ಮಗ
ಚನ್ನಮ್ಮನ ಕಿತ್ತೂರು:  ಅಂದು 21 ಜುಲೈ 1986ನೇ ಇಸವಿ. ಸಿ-ಡಾಟ್ ಅಭಿವೃದ್ಧಿಪಡಿಸಿದ ರ‌್ಯಾಕ್ಸ್ ಉತ್ಪನ್ನವನ್ನು ಮೊಟ್ಟ ಮೊದಲ ಬಾರಿಗೆ ಕಿತ್ತೂರಿನ ಟೆಲಿಕಾಮ್ ಕಚೇರಿಯಲ್ಲಿ ಅನುಷ್ಠಾನ ಗೊಳಿಸಲಾಯಿತು. ಪ್ರಧಾನಿ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರ ಕನಸಾಗಿದ್ದ ಗ್ರಾಮೀಣ ಭಾರತದ ದೂರಸಂಪರ್ಕ ಕ್ರಾಂತಿ ಜನ್ಮ ತಳೆದ ಅವಿಸ್ಮರಣೀಯ ದಿನವೂ ಅದಾಗಿತ್ತು.

ಮನೆಯಲ್ಲಿರುವ ದೂರವಾಣಿ, ದೇಶ ಹಾಗೂ ವಿದೇಶಗಳ ದೊಡ್ಡ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಸಾಧನವಾಗಿ ಪರಿವರ್ತಿತವಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ  ಬಿ.ಆರ್. ಜಕಾತಿ ನೇರವಾಗಿ ಪಿತ್ರೋಡಾ ಅವರಿಗೆ ದೂರವಾಣಿ ಕರೆ ಮಾಡಿ ದೂರಸಂಪರ್ಕ ಸೇವೆಯಲ್ಲಿನ ಕ್ರಾಂತಿಯನ್ನು ಶ್ಲಾಘಿಸಿದ್ದರು.

ಈ ಸದವಕಾಶ ಅವರ ಪುತ್ರ ಶಿವಾನಂದ ಜಕಾತಿಗೆ ಇಂದು ಒಲಿದು ಬಂತು. ಎನ್‌ಜಿಎನ್ ಸೇವೆಯನ್ನು ಮ್ಯಾಕ್ಸ್-ಎನ್‌ಜಿಗೆ ಉನ್ನತಿಕರಣಗೊಳಿಸುವ ಕಾರ್ಯಕ್ರಮ ಉದ್ಘಾಟನೆಗೊಂಡ ನಂತರ ದೆಹಲಿಯಲ್ಲಿ ಇದೇ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಸ್ಯಾಮ್ ಪಿತ್ರೋಡಾ ಜೊತೆ ಶಿವಾನಂದ  ಮಾತನಾಡಿದರು. `ಇದು ನನ್ನ ಸುಯೋಗ~ ಎಂದು ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.