ADVERTISEMENT

ಮದನಿ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಬೆಂಗಳೂರು: 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟದ ಪ್ರಮುಖ ಆರೋಪಿ, ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖಂಡ ಅಬ್ದುಲ್ ನಾಸರ್ ಮದನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ವಜಾ ಮಾಡಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರಿದ್ದ ಏಕಸದಸ್ಯ ಪೀಠ ಮದನಿಯ ಕೋರಿಕೆಯನ್ನು ತಳ್ಳಿಹಾಕಿತು. ‘ಆರೋಪಿಗೆ ಜಾಮೀನು ನೀಡಿದರೆ ರಾಜ್ಯ ಮತ್ತು ದೇಶದ ಭದ್ರತೆಗೆ ಅಪಾಯ ಎದುರಾಗುವ ಸಂಭವವಿದೆ’ ಎಂದೂ ನ್ಯಾಯಾಲಯ ಹೇಳಿದೆ.

‘ಆರೋಪಿಯ ವಿರುದ್ಧ ಆರಂಭದಲ್ಲಿ ಸಾಕ್ಷ್ಯ ನುಡಿದಿದ್ದ ಇಬ್ಬರು ಈಗ ಹಿಂದೇಟು ಹಾಕುತ್ತಿದ್ದು, ಮದನಿ ಜೈಲಿನಿಂದಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಆತನಿಗೆ ಜಾಮೀನು ದೊರೆತರೆ ಜೈಲಿನಿಂದ ಹೊರಬಂದು ಸಂಪೂರ್ಣ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಸಂಭವವೂ ಇದೆ’ ಎಂದು ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.‘ಮದನಿ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ತಂಡ ಸಾಕಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದೆ. ಬೆಂಗಳೂರು, ಅಹ್ಮದಾಬಾದ್ ಮತ್ತು ಜೈಪುರದಲ್ಲಿ ನಡೆದ ಸ್ಫೋಟಗಳಲ್ಲಿ ಸಾಮ್ಯತೆ ಇರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಸರಣಿ ಸ್ಫೋಟ ನಡೆಸಿದ್ದ ಆರೋಪಿಗಳ ಜೊತೆ ಮದನಿ ನಿಕಟ ಸಂಪರ್ಕದಲ್ಲಿದ್ದು, ಅವರಿಗೆ ರಕ್ಷಣೆ ನೀಡಿದ್ದ ಎಂಬುದೂ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಯ ವಿರುದ್ಧ ಪ್ರಬಲ ಸಾಕ್ಷ್ಯಗಳು ಇವೆ’ ಎಂದು ನ್ಯಾ.ಜಗನ್ನಾಥನ್ ಹೇಳಿದರು.

ವ್ಯಕ್ತಿಗತ ಸ್ವಾತಂತ್ರ್ಯ ಕುರಿತು ಆರೋಪಿ ಪರ ವಕೀಲರು ಎತ್ತಿದ್ದ ಪ್ರಶ್ನೆಗಳಿಗೆ ತೀರ್ಪಿನಲ್ಲಿ ಪ್ರತಿಕ್ರಿಯಿಸಿದ ನ್ಯಾಯಾಲಯ, ‘ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯ ಅತ್ಯಂತ ಮುಖ್ಯವಾದುದು. ಅದೇ ಸಮಯದಲ್ಲಿ ರಾಷ್ಟ್ರದ ಹಿತವನ್ನೂ ಕಡೆಗಣಿಸಲಾಗದು’ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.‘ರಾಜ್ಯದ ಮತ್ತು ದೇಶದ ಭದ್ರತೆಯ ಪ್ರಶ್ನೆ ಅಡಗಿರುವ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಆರೋಪಿಗಳಿಗೆ ಜಾಮೀನು ನೀಡುವುದಿಲ್ಲ. ವ್ಯಕ್ತಿಗಿಂತ ದೇಶ ದೊಡ್ಡದು ಎಂಬುದಕ್ಕೆ ಈ ಪ್ರಕರಣವೂ ಒಂದು ಉದಾಹರಣೆ’ ಎಂದರು.

ಚಿಕಿತ್ಸೆಗೆ ಆದೇಶ: ತನಗೆ ತೀವ್ರವಾದ ಆರೋಗ್ಯದ ಸಮಸ್ಯೆ ಇದೆ ಎಂದು ಆರೋಪಿ ಹೇಳಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಆತನ ಆರೋಗ್ಯದ ಬಗ್ಗೆ ಸರ್ಕಾರ ನಿಗಾ ವಹಿಸಬೇಕು. ಮದನಿಗೆ ಅಗತ್ಯ ಚಿಕಿತ್ಸೆಗೆ ಅಲ್ಲಿಯೇ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.