ADVERTISEMENT

ಮದನ್ ನಾಯಕ್ ಹತ್ಯೆ ಪ್ರಕರಣ:ಮೊಸಳೆ ಪಾರ್ಕ್ ಸ್ಥಗಿತ, ದಾಂಡೇಲಿಗೆ ಸಿಐಡಿ ತಂಡ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
ಮದನ್ ನಾಯಕ್ ಹತ್ಯೆ ಪ್ರಕರಣ:ಮೊಸಳೆ ಪಾರ್ಕ್ ಸ್ಥಗಿತ, ದಾಂಡೇಲಿಗೆ ಸಿಐಡಿ ತಂಡ
ಮದನ್ ನಾಯಕ್ ಹತ್ಯೆ ಪ್ರಕರಣ:ಮೊಸಳೆ ಪಾರ್ಕ್ ಸ್ಥಗಿತ, ದಾಂಡೇಲಿಗೆ ಸಿಐಡಿ ತಂಡ   

ದಾಂಡೇಲಿ: ಇಲ್ಲಿನ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ್ ನಾಯಕ್ ಹತ್ಯೆ ಹಿನ್ನೆಲೆಯಲ್ಲಿ ಮೊಸಳೆ ಪಾರ್ಕ್ ಬಂದ್ ಆಗಿದೆ. ಹಾಲಮಡ್ಡಿಯ ಬಳಿ ಕಾಳಿ ದಡದಲ್ಲಿರುವ ಖಾಸಗಿ ಜಮೀನಿನಲ್ಲಿ ಸದ್ಯ ಪೊಲೀಸರು ಕಾವಲು ಕಾಯತೊಡಗಿದ್ದು, ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಕಾಳಿ ನದಿಯ ಹಿನ್ನೀರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೊಸಳೆಗಳು ವಾಸವಾಗಿವೆ. ಹಾಲಮಡ್ಡಿಯ ದಾಂಡೇಲಪ್ಪ ದೇವಸ್ಥಾನದ ಹಿಂಭಾಗದ ನದಿ ನೀರಿನಲ್ಲಿ ಕೊಂಚ ದಿಣ್ಣೆ ಇದ್ದು, ಇಲ್ಲಿ ಮೊಸಳೆಗಳು ದಣಿವಾರಿಸಿಕೊಳ್ಳಲು ಬರುತ್ತವೆ. ಹೀಗೆಂದೇ ಇಲ್ಲಿ ಮೊಸಳೆ ವೀಕ್ಷಣೆ ಕ್ರಮೇಣ ಜನಪ್ರಿಯಗೊಂಡಿತ್ತು.

ಶಿವರಾಮ ಅಪ್ಪಾಜಿ ಪಾಟೀಲ ಎಂಬುವವರಿಗೆ ಸೇರಿದ 7 ಎಕರೆ ಜಮೀನು ಕೂಡ ಇಲ್ಲಿದ್ದು, ಇದರಲ್ಲಿ 1.20 ಎಕರೆ ವಿಸ್ತೀರ್ಣದಲ್ಲಿ ಅವರು ಪುಟ್ಟ ರೆಸಾರ್ಟ್ ಕಟ್ಟಿಕೊಂಡಿದ್ದರು.ದಾಂಡೇಲಿ ವಿಭಾಗದ ಆರ್‌ಎಫ್‌ಒ ಮೃತ್ಯುಂಜಯಪ್ಪ ಅವರು ಹೇಳುವಂತೆ, ಈ ಜಮೀನಿನಲ್ಲಿ ಶಿವರಾಮ ಪಾಟೀಲ ಅವರು ಸಾರ್ವಜನಿಕರಿಗೆ ಮೊಸಳೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕಾಗಿ ಜನರಿಂದ ಅಕ್ರಮವಾಗಿ ಇಂತಿಷ್ಟು ಶುಲ್ಕ ವಸೂಲಿ ಮಾಡುತ್ತಿದ್ದರು. ಮೊಸಳೆಗಳನ್ನು ಹತ್ತಿರಕ್ಕೆ ಸೆಳೆಯಲು ಅವುಗಳಿಗೆ ಮಾಂಸ ಎರಚುತ್ತಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಶಿವರಾಮ ಅವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ 2011ರ ಜೂನ್‌ನಲ್ಲಿ ಜುಲೈ 23ರಂದು ಎಫ್‌ಐಆರ್ ದಾಖಲಾಗಿತ್ತು. ಹಳಿಯಾಳ ಕೋರ್ಟ್‌ನಲ್ಲಿ  ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆನಂತರ ಅವರು ಮೊಸಳೆಗಳಿಗೆ ಮಾಂಸ ಹಾಕುವುದನ್ನು ತ್ಯಜಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಅಲ್ಲಿಯೇ ಏಕೆ? ದಾಂಡೇಲಪ್ಪ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈ ಹಿಂದೆ ಇಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಣಿ ಬಲಿ ನಡೆಯುತ್ತಿತ್ತು. ಆ ಪ್ರಾಣಿಗಳ ರುಂಡವನ್ನು ನೀರಿಗೆ ಎಸೆಯಲಾಗುತ್ತಿತ್ತು. ಈ ಕಾರಣದಿಂದಾಗಿ ದೇವಸ್ಥಾನದ ಹಿಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ಸೇರಲು ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಮಳೆಗಾಲದ ಸಂದರ್ಭದಲ್ಲಿ ಈ ಮೊಸಳೆಗಳು ಕಾಲುವೆ ಮೂಲಕ ದಾಂಡೇಲಿ ನಗರಕ್ಕೂ ಪ್ರವೇಶಿಸುತ್ತವೆ. ಅನೇಕ ಬಾರಿ ಇದೇ ಅಧಿಕಾರಿಗಳು ಅವುಗಳನ್ನು ಹಿಡಿದು ವಾಪಸ್ ನದಿಗೆ ಬಿಟ್ಟಿದ್ದಾರೆ. ಆದರೆ ಇವುಗಳಿಂದ ಜೀವಹಾನಿಯಾದ ಉದಾಹರಣೆಗಳಿಲ್ಲ.

ಮೊಸಳೆ ಪಾರ್ಕ್‌ಗೆ ಪ್ರಸ್ತಾವ: ದೇವಸ್ಥಾನದ ಹಿಂಭಾಗ ಮೊಸಳೆ ಪಾರ್ಕ್ ನಿರ್ಮಾಣದ ಯೋಜನೆ ಅರಣ್ಯ ಇಲಾಖೆ ಮುಂದಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಶಿವರಾಮ ಅವರ ಜಮೀನನ್ನು ವಶಪಡಿಸಿಕೊಡುವಂತೆ ತಹಶೀಲ್ದಾರರಿಗೆ ಅನೇಕ ಬಾರಿ ಪತ್ರ ಬರೆದಿದ್ದೇವೆ. ಆದರೂ ಈವರೆಗೆ ಒಮ್ಮೆಯೂ ಉತ್ತರ ಬಂದಿಲ್ಲ ಎನ್ನುತ್ತಾರೆ ದಾಂಡೇಲಿ ಎಸಿಎಫ್ (ಉಸ್ತುವಾರಿ) ಡಿ.ಆರ್. ನಾಯಕ.
 

ಶಿವರಾಮ ಪಾಟೀಲ ಬಂಧನ

ಎಸಿಎಫ್ ಮದನ್ ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದ ಮಾಲೀಕ ಶಿವರಾಮ ಪಾಟೀಲ ಅವರನ್ನು ಶುಕ್ರವಾರ ಬಂಧಿಸಿದ್ದಾರೆ.

1972ರ ವನ್ಯಜೀವಿ ಸಂಕ್ಷರಣಾ ಕಾಯ್ದೆ ಕಲಂ 9ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಂಕೋಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ಆರ್‌ಎಫ್‌ಒ  ಮೃತ್ಯುಂಜಯಪ್ಪ ತಿಳಿಸಿದರು.
 
ಸಿಐಡಿ ತಂಡ ಭೇಟಿ:ಪ್ರಕರಣದ ತನಿಖೆಗಾಗಿ ಅಶೋಕ್‌ಕುಮಾರ್ ನೇತೃತ್ವದ ಸಿಐಡಿ ತಂಡ ಶುಕ್ರವಾರ ದಾಂಡೇಲಿಗೆ ಆಗಮಿಸಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ ಗುಡಿಮನಿ ಹಾಗೂ ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.

36 ಮಂದಿ ವಿರುದ್ಧ ದೂರು ದಾಖಲು: ಹತ್ಯೆ ಖಂಡಿಸಿ ದಾಂಡೇಲಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ 36 ಮಂದಿ ವಿರುದ್ಧ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. ಶಾಂತಿ ಕದಡುವ ಯತ್ನದ ಆರೋಪದ ಮೇಲೆ ದೂರು ದಾಖಲಾಗಿದ್ದು, ದೂರಿನ ಪ್ರತಿಯನ್ನು ನ್ಯಾಯಾಲಯಕ್ಕೆ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.