ADVERTISEMENT

ಮದ್ದೂರು ರೇಣುಕಾದೇವಿ ಜಾತ್ರಾ ಮಹೋತ್ಸವಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 17:25 IST
Last Updated 14 ಫೆಬ್ರುವರಿ 2011, 17:25 IST
ಮದ್ದೂರು ರೇಣುಕಾದೇವಿ ಜಾತ್ರಾ ಮಹೋತ್ಸವಕ್ಕೆ ಸಜ್ಜು
ಮದ್ದೂರು ರೇಣುಕಾದೇವಿ ಜಾತ್ರಾ ಮಹೋತ್ಸವಕ್ಕೆ ಸಜ್ಜು   

ಮದ್ದೂರು: ಸವದತ್ತಿ ಎಲ್ಲಮ್ಮನಷ್ಟೆ ಪ್ರಖ್ಯಾತಿ ಹೊಂದಿರುವ ಪಟ್ಟಣದ ಹೊಳೆ ಬೀದಿಯ ಶ್ರೀರೇಣುಕಾದೇವಿ (ಎಲ್ಲಮ್ಮತಾಯಿ) 39ನೇ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ (ಫೆ.18)  ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕಾಗಿ ಪಟ್ಟಣ ಸಜ್ಜುಗೊಳ್ಳುತ್ತಿದೆ.

ಉತ್ಸವಕ್ಕೆ ಪ್ರತಿ ವರ್ಷ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ದೇವಿಗೆ ತಮ್ಮ ಹರಕೆ-ಪೂಜೆ ಸಲ್ಲಿಸುತ್ತಾರೆ. ಕಳೆದ 38 ವರ್ಷಗಳಿಂದ ಧರ್ಮದರ್ಶಿಗಳಾದ ಟಿ.ಶ್ರೀನಿವಾಸ್, ವಿ.ಅಂಜನಪ್ಪ, ದಿ.ರಾಮಕೃಷ್ಣಪ್ಪ, ಕೆ.ಕೃಷ್ಣಮೂರ್ತಿ ಕುಟುಂಬವರ್ಗ ಉತ್ಸವ ನಡೆಸಿಕೊಂಡು ಬರುತ್ತಿದೆ.

ಉತ್ಸವದ ಹಿನ್ನಲೆ: ಈಡಿಗ ಕುಲ ಸೇರಿದಂತೆ ಎಲ್ಲಾ ವರ್ಗಗಳ ಜನರ ಆರಾಧ್ಯ ದೈವ ಎಲ್ಲಮ್ಮದೇವಿಯನ್ನು ಸಂದರ್ಶಿಸಲು ದೂರದ ಸವದತ್ತಿಗೆ ಹೋಗಲು ಅಂದು ಪಟ್ಟಣದ ಬಡ ಭಕ್ತರಿಗೆ ಸಾಧ್ಯವಾಗದ ದುಃಸ್ಥಿತಿ ಒದಗಿತ್ತು.

ಇದನ್ನು ಮನಗಂಡ ಪಟ್ಟಣದ ಹೊಳೆಬೀದಿಯ ಈಡಿಗ ಕುಲದ ಹಿರಿಯರು, 38 ವರ್ಷದ ಹಿಂದೆ ಪಟ್ಟಣದ ಉತ್ತರ ದಿಕ್ಕಿನಲ್ಲಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ, ದೇಗುಲ ನಿರ್ಮಿಸಿದರು. ಅಂದಿನಿಂದ ಪ್ರತಿ ವರ್ಷ ಫೆಬ್ರವರಿಯಲ್ಲಿ ವ್ಯಾಸ ಪೂರ್ಣಿಮೆ ದಿನದಂದು ಜಾತ್ರಾ ಮಹೋತ್ಸವ ನಡೆಯುತ್ತಿದೆ.

ಫೆ.17ರಂದು ಮುಂಜಾನೆ ದೇಗುಲದ ಆವರಣದಲ್ಲಿ ಮೂಲದೇವರ ಅನುಜ್ಞೆ, ಗಣಪತಿಪೂಜೆ ಹಾಗೂ ಪಾರಾಯಣ ನಡೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ.

ಫೆ.18ರಂದು ಬೆಳಿಗ್ಗೆ 6ಗಂಟೆಗೆ ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕೆಂಗೇರಿಯ ವೇದಾಂತಿ ರಾಜಶೇಖರ ದೀಕ್ಷಿತ್ ಅವರು ನವಗ್ರಹ ಹೋಮ, ಶ್ರೀ ಸುದರ್ಶನ ಮಹಾಯಾಗ, ಶ್ರೀ ಮಹಾಚಂಡಿಕಾ ಹೋಮ ಪೂಜಾ ಕೈಕಂರ್ಯಗಳನ್ನು ನಡೆಸಿಕೊಡಲಿದ್ದಾರೆ.

ರಾತ್ರಿ 8ಗಂಟೆಗೆ ಹೊಳೆ ಆಂಜನೇಯಸ್ವಾಮಿ ದೇಗುಲ ಆವರಣದಿಂದ ಶ್ರೀ ರೇಣುಕಾದೇವಿಯ ಭವ್ಯ ಮುತ್ತಿನ ಪಲ್ಲಕ್ಕಿ ಮಹೋತ್ಸವವ ಹೊರಡಲಿದ್ದು, ವಿವಿಧ ಜಾನಪದ ಕಲಾ ಮೇಳಗಳೊಂದಿಗೆ ಇಡೀ ರಾತ್ರಿ ಪೂರ್ಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಉತ್ಸವದಲ್ಲಿ ಮದ್ದೂರಮ್ಮ, ದಂಡಿನ ಮಾರಮ್ಮ, ಕದಲೂರು, ನಗರಕೆರೆ ಪಟಲದಮ್ಮ ಪೂಜಾ ಪಟಗಳು, ಚಿಕ್ಕರಸಿನಕೆರೆ ಹಾಗೂ ಕಾರ್ಕಳ್ಳಿಯ ದೇವರ ಬಸವಗಳು ಭಾಗವಹಿಸಲಿವೆ.

ಫೆ.19ರ ಸಂಜೆ ವೇದಪಾರಾಯಣದೊಂದಿಗೆ ಕ್ಷೀರಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಶ್ರೀರೇಣುಕಾ ಎಲ್ಲಮ್ಮದೇವಿ ಅವರ ಉತ್ಸವಕ್ಕೆ ತೆರೆ ಬೀಳಲಿದೆ.

ದಾಸೋಹ ಭವನ: ಇದೀಗ ಇಲ್ಲಿನ ಧರ್ಮದರ್ಶಿ ಮಂಡಳಿ ಅನ್ನ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗಿದೆ. ಈಗ 13 ಗುಂಟೆ ಜಮೀನು ಖರೀದಿಸಲಾಗಿದೆ. ಮುಂದಿನ ಮಹೋತ್ಸವದ ವೇಳೆಗೆ ಭವನ  ನಿರ್ಮಾಣವಾಗುವ ವಿಶ್ವಾಸ ಧರ್ಮದರ್ಶಿಗಳಾದ ಟಿ.ಶ್ರೀನಿವಾಸ್, ವಿ.ಅಂಜನಪ್ಪಅವರದು.

ಉದ್ಯಮಿಗಳಾದ ವಿ.ಅಂಜನಪ್ಪ, ಟಿ.ದಾಸಪ್ಪ, ಟಿ.ಶ್ರೀನಿವಾಸ್, ಟಿ.ವೆಂಕಟೇಶ್, ಟಿ.ರಮೇಶ್, ಜಿ.ಟಿ.ನಾರಾಯಣಸ್ವಾಮಿ, ಎಚ್.ಟಿ.ಗೋವಿಂದರಾಜ್, ಬಿ.ವಿ.ಕೃಷ್ಣಪ್ಪ, ಲಕ್ಷ್ಮಮ್ಮಜಯಗೋಪಾಲ್, ಟಿ.ಶಿವಕುಮಾರ್, ಟಿ.ಎಂ.ಕೃಷ್ಣ, ಕೆ.ವಿ.ದಿನೇಶ್, ಹೊಸೂರು ನಾರಾಯಣ್, ಬಿ.ವಿ.ಕೃಷ್ಣಪ್ಪ, ಡಾ.ಜನಾರ್ಧನ್, ಎಸ್.ಜಿ.ದೇವರಾಜು, ಸದಾನಂದ ಪಾಂಡು, ಕೆ.ರಾಮಚಂದ್ರಪ್ಪ,  ಕೆ.ದೇವರಾಜು, ಪಂಕಜಾಕ್ಷಿ ಕೃಷ್ಣಪ್ಪ, ಪಿ.ಸುರೇಶ್, ಪಿ.ಶಿವಣ್ಣ, ಎಂ.ಕೆ.ಶ್ರೀನಿವಾಸ್ ಸೇರಿದಂತೆ ಹಲವರು, ಅನ್ನದಾಸೋಹ ಭವನಕ್ಕೆ ಉದಾರ ಧನ ಸಹಾಯ ಮಾಡಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.