ADVERTISEMENT

ಮದ್ಯದಂಗಡಿಗಳಲ್ಲಿ ಬಡವರ ರೇಷನ್ ಕಾರ್ಡ್ ಅಡ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಮೈಸೂರು: ಬಡವರಿಗೆ ನೀಡಲಾದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ಗಳು ಅವರ ಮನೆಯಲ್ಲಿಯೇ ಇರಬೇಕು. ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್‌ಗಳನ್ನು ತಂದರೆ ನ್ಯಾಯ ಬೆಲೆ ಅಂಗಡಿಯವರು ಅದನ್ನು ಪರಿಶೀಲಿಸಬೇಕು ಎಂದು ಕಾನೂನು ಇದೆ. ಆದರೆ ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ತಾಲ್ಲೂಕುಗಳ ಮದ್ಯದಂಗಡಿಗಳಲ್ಲಿ ರಾಶಿ ರಾಶಿ ರೇಷನ್ ಕಾರ್ಡ್‌ಗಳು ಇವೆ. ಕೆಲವು ಗ್ರಾಮಗಳಲ್ಲಿ ಒಬ್ಬನೇ ವ್ಯಕ್ತಿ ಹಲವಾರು ಕಾರ್ಡ್ ತಂದು ಟ್ರ್ಯಾಕ್ಟರ್‌ನಲ್ಲಿ ಪಡಿತರ ತೆಗೆದುಕೊಂಡು ಹೋಗುತ್ತಾನೆ!

ಎಚ್.ಡಿ.ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಆದಿವಾಸಿಗಳು ಇದ್ದಾರೆ. ಇಲ್ಲಿ ಸುಮಾರು 2700 ಆದಿವಾಸಿ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್ ವಿತರಿಸಲಾಗಿದೆ. ಸಾಮಾನ್ಯವಾಗಿ ಆದಿವಾಸಿಗಳು ಕೂಲಿಗಾಗಿ ಕೊಡಗಿಗೆ ಹೋಗುತ್ತಾರೆ. ಹೀಗೆ ಕೊಡಗಿಗೆ ಹೋಗುವ ಮೊದಲು ತಮ್ಮ ರೇಷನ್ ಕಾರ್ಡ್‌ಗಳನ್ನು ಗ್ರಾಮದ ಶ್ರೀಮಂತರ ಮನೆ, ನ್ಯಾಯಬೆಲೆ ಅಂಗಡಿ ಮಾಲೀಕರು ಅಥವಾ ಮದ್ಯದಂಗಡಿಯಲ್ಲಿ ಅಡ ಇಟ್ಟು ತೆರಳುತ್ತಾರೆ.

ರೇಷನ್ ಕಾರ್ಡ್ ಅಡ ಇಟ್ಟು ಪಡೆದ ಹಣಕ್ಕೆ ಅವರು ಬಡ್ಡಿಯನ್ನೂ ನೀಡಬೇಕು. ಜೊತೆಗೆ ಪಡಿತರ ಕೂಡ ಅವರಿಗೆ ಸಿಗುವುದಿಲ್ಲ. ಆದಿವಾಸಿ ಹಾಡಿಗಳಲ್ಲಿಯೂ ಈಗ ಅನಧಿಕೃತ ಮದ್ಯದಂಗಡಿಗಳು ಹೆಚ್ಚಾಗಿರುವುದರಿಂದ ಆದಿವಾಸಿಗಳು ಮದ್ಯದ ದಾಸರಾಗಿದ್ದಾರೆ. ಹಣ ಇಲ್ಲದಿದ್ದರೆ ರೇಷನ್ ಕಾರ್ಡ್ ಅಡ ಇಟ್ಟು ಕುಡಿಯುತ್ತಾರೆ. ಇದರಿಂದ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸೂಕ್ತ ಪ್ರಮಾಣದ ಆಹಾರ ಲಭ್ಯವಾಗದೇ ಇರುವುದರಿಂದ ಅವರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಆದಿವಾಸಿ ಮುಖಂಡ ಚಿಕ್ಕಣ್ಣ ಹೇಳುತ್ತಾರೆ.

ADVERTISEMENT

ಎಚ್.ಡಿ.ಕೋಟೆ ತಾಲ್ಲೂಕಿನ ಹುಣಸೆಕುಪ್ಪೆಯಲ್ಲಿ 8, ದಮ್ಮನಕಟ್ಟೆಯಲ್ಲಿ 2, ಮೇಟಿಕುಪ್ಪೆಯಲ್ಲಿ 6, ಮೇಟಿಕುಪ್ಪೆ ಹಾಡಿಯಲ್ಲಿ 1, ಜಿ.ಎಂ.ಹಳ್ಳಿಯಲ್ಲಿ 8, ಮಂಟಿಹಾಡಿಯಲ್ಲಿ 3, ಇದೇ ಗ್ರಾಮದತೋಟದ ಮನೆಯಲ್ಲಿ ಒಂದು, ಮುಳ್ಳೂರು ಗ್ರಾಮದಲ್ಲಿ 4 ಅನಧಿಕೃತ ಹೆಂಡದಂಗಡಿಗಳಿವೆ. ಇಲ್ಲೆಲ್ಲ ಆದಿವಾಸಿಗಳ ಅಂತ್ಯೋದಯ ಕಾರ್ಡ್‌ಗಳ ರಾಶಿಯೇ ಇವೆ ಎಂದು ಆದಿವಾಸಿ ಮಹಿಳೆಯರು ಆರೋಪಿಸುತ್ತಾರೆ. ಮುಂದಿನ ವಾರ ಯುಗಾದಿ ಬರುತ್ತಿದೆ, ಆದಿವಾಸಿಗಳಿಗೆ ಯುಗಾದಿ ಹಬ್ಬ ಪ್ರಮುಖವಾದ ಹಬ್ಬ. ಕೊಡಗು ಮತ್ತು ಇತರ ಕಡೆಗೆ ಕೂಲಿಗಾಗಿ ಹೋದವರೆಲ್ಲಾ ವಾಪಸು ಬರುತ್ತಾರೆ. ಆದರೆ ಅವರ ಕಾರ್ಡ್‌ಗಳು ಬೇರೆಯವರ ಮನೆಯಲ್ಲಿವೆ. ಜಿ.ಎಂ.ಹಳ್ಳಿಯಲ್ಲಿ ಆದಿವಾಸಿಗಳಿಂದ ರೇಷನ್ ಕಾರ್ಡ್ ಇಟ್ಟುಕೊಂಡವರು ಟ್ರ್ಯಾಕ್ಟರ್‌ನಲ್ಲಿ ಬಂದು ರೇಷನ್ ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಅವರ ಆಪಾದನೆ.

ಆದಿವಾಸಿಗಳಿಗೆ ವಿತರಿಸಲಾದ ಅಂತ್ಯೋದಯ ಕಾರ್ಡ್‌ಗಳನ್ನು ಕೆಲವು ಶ್ರೀಮಂತರು, ಮದ್ಯದಂಗಡಿ ಮಾಲೀಕರು, ನ್ಯಾಯ ಬೆಲೆ ಅಂಗಡಿ ಮಾಲೀಕರು ಇಟ್ಟುಕೊಂಡಿರುವ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಹಲವಾರು ಬಾರಿ ದೂರು ನೀಡಲಾಗಿದೆ. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದಿವಾಸಿಗಳ ರೇಷನ್ ಕಾರ್ಡ್ ಇಟ್ಟುಕೊಂಡವರು ಹಾಗೂ ಅನಧಿಕೃತವಾಗಿ ಮದ್ಯದಂಗಡಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹುಣಸೂರು ಡೀಡ್ ಸಂಸ್ಥೆ ನಿರ್ದೇಶಕ ಎಸ್.ಶ್ರೀಕಾಂತ್ ಒತ್ತಾಯಿಸುತ್ತಾರೆ.

ದೂರು ಬಂದಿಲ್ಲ: ಆದಿವಾಸಿಗಳ ರೇಷನ್ ಕಾರ್ಡ್‌ಗಳನ್ನು ಅನಧಿಕೃತವಾಗಿ ಇಟ್ಟುಕೊಂಡಿರುವ ಬಗ್ಗೆ ಅಥವಾ ಆದಿವಾಸಿಗಳು ಕಾರ್ಡ್‌ಗಳನ್ನು ಅಡ ಇಟ್ಟಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ಕಾರ್ಡ್‌ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಅಪರಾಧ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕಿ ಕುಮುದ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.