ADVERTISEMENT

‘ಮನವೊಲಿಸಲು ಅವರೇನು ಹುಡುಗನಲ್ಲ’: ಸತೀಶ ಕುರಿತು ರಮೇಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 12:30 IST
Last Updated 7 ಜೂನ್ 2018, 12:30 IST
ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ
ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ   

ಬೆಳಗಾವಿ: ‘ಸಹೋದರ, ಶಾಸಕ ಸತೀಶ ಜಾರಕಿಹೊಳಿ ಮನವೊಲಿಸುವುದಕ್ಕೆ ಅವರೇನು ಹುಡುಗನಲ್ಲ. ಅನುಭವಿ ಹಾಗೂ ಪ್ರಬುದ್ಧ ರಾಜಕಾರಣಿ. ಯಾವುದೇ ಭಿನ್ನಮತೀಯ ಚಟುವಟಿಕೆಗಳನ್ನೂ ಅವರು ಮಾಡುವುದಿಲ್ಲ’ ಎಂದು ಸಚಿವ ರಮೇಶ ಜಾರಕಿಹೊಳಿ ಅವರು ಗುರುವಾರ ಹೇಳಿದರು.‌

‌ತಾಲ್ಲೂಕಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವುದೆಲ್ಲವೂ ಊಹಾಪೋಹ’ ಎಂದು ತಿಳಿಸಿದರು.

‌‘‌ಸರ್ಕಾರ ಬಂದಾಗ, ಅಧಿಕಾರ ಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ, ಸಂದರ್ಭಕ್ಕೆ ಅನುಗುಣವಾಗಿ ತ್ಯಾಗ ಮನೋಭಾವ ಇರಬೇಕಾಗುತ್ತದೆ. ಸತೀಶ ಸಚಿವ ಸ್ಥಾನ ಕೇಳಿದ್ದರು. ಆದರೆ, ಹೈಕಮಾಂಡ್ ನನಗೆ ಕೊಟ್ಟಿದೆ. ಹಿಂದಿನ ಸರ್ಕಾರದ ಆರಂಭದಲ್ಲಿ ನನಗೆ ಸಚಿವ ಸ್ಥಾನ ಕೈತಪ್ಪಿತ್ತು. ಹಿರಿಯ ಶಾಸಕನಾಗಿದ್ದರೂ ನಾನು ಸುಮ್ಮನಿದ್ದೆ. ಯಾರಾದರೂ ಮಧ್ಯಸ್ಥಿಕೆ ವಹಿಸಿದರೆ ಈಗಲೂ ಅವರಿಗೆ ಗಾದಿ ಬಿಟ್ಟು‌ಕೊಡಲು ಸಿದ್ಧವಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಅವರ ಹಿಂಬಾಲಕರು ಪ್ರತಿಭಟನೆ ನಡೆಸಿರಬಹುದು. ಕಾ‌ಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಸತೀಶ, ರಮೇಶ ಎನ್ನುವುದಕ್ಕಿಂತ ಪಕ್ಷ ದೊಡ್ಡದು. ನಮ್ಮಂತಹ ಹಲವು ಮಂದಿಯನ್ನು ಸೃಷ್ಟಿಸುವ ಶಕ್ತಿ ಕಾಂಗ್ರೆಸ್‌ಗಿದೆ. ವಾರದಲ್ಲಿ ಎಲ್ಲವೂ ಸರಿಯಾಗಲಿದೆ. ಅವರನ್ನು ಮನವೊಲಿಸುವ ಅಗತ್ಯವಿಲ್ಲ. ಅವರೇ ತಿಳಿದುಕೊಳ್ಳುತ್ತಾರೆ. ಸಮ್ಮಿಶ್ರ ಸರ್ಕಾರ ರಾಜ್ಯದ ಜನರ ನಿರೀಕ್ಷೆಯಂತೆ ಆಡಳಿತ ನಡೆಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಮೂಲೆಗುಂಪಾಗಿಲ್ಲ. ನನ್ನನ್ನು ಮಂತ್ರಿ ಮಾಡಿದವರೇ ಅವರು’ ಎಂದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.