ADVERTISEMENT

ಮನೆಯಲ್ಲಿ ದೆವ್ವವಿಲ್ಲ, ಹೆಂಡತಿ ಇದ್ದಾಳೆ...!

​ಪ್ರಜಾವಾಣಿ ವಾರ್ತೆ
Published 26 ಜನವರಿ 2013, 19:59 IST
Last Updated 26 ಜನವರಿ 2013, 19:59 IST

ಧಾರವಾಡ: `ಎಲ್ಲ ದೇವರುಗಳು ಆಯುಧಗಳನ್ನು ಏಕೆ ಹಿಡಿದುಕೊಂಡಿದ್ದಾರೆ. ನಮಗೆ ಆಯುಧ ಹಿಡಿದಿರುವ ದೇವರು ಬೇಡ, ಕಡಗೋಲು ಹಿಡಿದ ಕೃಷ್ಣ ಬೇಕು, ಶಿಲುಬೆ  ಹೊತ್ತ ಏಸು ಬೇಕು,  ಧ್ಯಾನಮುದ್ರೆಯ ಬುದ್ಧ ಬೇಕು... ಇವರು ಇವತ್ತಿನ ದೇವರುಗಳಾಗಬೇಕು'
-ಇದು ಹಿರಿಯ ಕವಿ ಡಾ. ಎಚ್. ಎಸ್.ವೆಂಕಟೇಶಮೂರ್ತಿ ಅವರ ಆಶಯ.

ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ಎರಡನೆಯ ದಿನ  `ಸ್ವರಚಿತ ಕವನ ವಾಚನ' ಗೋಷ್ಠಿಯಲ್ಲಿ ಅವರು ಆಯುಧ ಹಿಡಿದ ದೇವರ ಬಗ್ಗೆ ತಮ್ಮ ಆಕ್ಷೇಪಣೆಯಿದೆ ಎಂದರು.

`500 ವರ್ಷಗಳ ಹಿಂದೆ ಇದ್ದಕ್ಕಿದ್ದ-
ಹಾಗೆ ಸೆರೆಮನೆ ಗೋಡೆ ಸಿಡಿದು ಬೆಳಕಿನ ಕಿಂಡಿ.
ಕಿಂಡಿಯಲಿ ಕಂಡದ್ದು ಬೆರಗುಗಣ್ಣಿನ ಮೋರೆ,
ಝಲ್ಲೆಂದು ಎದೆ ಕೈ ಕಡಗೋಲು ನಡುಗಿತ್ತು
ಎಂಥ ಕಣ್ಣುಗಳಯ್ಯ, ಕರುಣೆ ಅನುಕಂಪ ತನ್ಮಯ ಭಾವ...'

ಕನಕನ ಕಿಂಡಿಯಲ್ಲಿ ಕನಕದಾಸರ ಮುಖ ಕಂಡ ಕೃಷ್ಣ ಅಂದಿನಿಂದಲೂ ಅಂಥ ಕನಕನ ಮುಖ ಮತ್ತೆ ಕಂಡೀತೆ ಎಂದು ಈಗಲೂ ಕಾಯುತ್ತಿದ್ದಾನೆ ಎಂದು   `ಉಡುಪಿಯ ಕೃಷ್ಣನ ಸ್ವಗತ' ಕವನದಲ್ಲಿ ಅವರು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟರು.

ತಾವು ಇತ್ತೀಚೆಗೆ ಬರೆದ `ಕನ್ನಡಿಯ ಸೂರ್ಯ' ` ಶ್ರೀ ಸಂಸಾರಿ' ಹಾಗೂ 40 ವರ್ಷಗಳ ಹಿಂದೆ ಬರೆದ `ಅಮೆರಿಕದಲ್ಲಿ ಬಿಲ್ಲು ಹಬ್ಬ'ವನ್ನೂ ಅವರು ವಾಚಿಸಿದರು.

ಮತ್ತೊಬ್ಬ ಕವಿ ಡಾ. ಬಿ.ಆರ್.ಲಕ್ಷ್ಮಣರಾವ್ ಹನಿಗವನಗಳೊಂದಿಗೆ ಕವನ ವಾಚನ ಪ್ರಾರಂಭಿಸಿ ಸಭಿಕರಿಗೆ ಕಚಗುಳಿಯಿಟ್ಟರು.

`ನನ್ನ ಮನೆಯಲ್ಲಿ ಕಾಮಧೇನುವಿಲ್ಲ, ಕಲ್ಪವೃಕ್ಷವಿಲ್ಲ,
ರಂಭೆ ಊರ್ವಶಿಯರಿಲ್ಲ
ಕೆಣಕಿ ಕಾಡುವ ಶತ್ರುವಿಲ್ಲ, ಅಂತರಂಗದ ಮಿತ್ರರಿಲ್ಲ,
ದೆವ್ವವಿಲ್ಲ, ದೇವಿಯಿಲ್ಲ, ಕ್ರೀಡೆಯಿಲ್ಲ, ಪೀಡೆಯಿಲ್ಲ

ಎಂದೆಲ್ಲ ನನಗೆ ಅನ್ನಿಸಿಯೇ ಇಲ್ಲ...' ಎನ್ನುವಷ್ಟರಲ್ಲಿಯೇ ಸಭಿಕರು ಚಪ್ಪಾಳೆ ತಟ್ಟಿ ನಗೆಗಡಲಲ್ಲಿ ಮುಳುಗಿದರು (` ಕಾರಣ-ನನಗೆ ಹೆಂಡತಿ ಇದ್ದಾಳೆ'  ಎನ್ನುವ ಕವಿಯ ಅಂತಿಮ ಮಾತು ಸಭಿಕರಿಗೆ ಅದಾಗಲೇ ಮುಟ್ಟಿತ್ತು!)

ನಂತರ ಅವರು ಓದಿದ್ದು 40 ವರ್ಷದ ಹಿಂದಿನ ಅವರ ಪ್ರಸಿದ್ಧ ಕವನ `ಫೋಟೋಗ್ರಾಫರ್'.
ನಗರದಲ್ಲಿನ ಮಧ್ಯಮವರ್ಗದ ಗೃಹಿಣಿಯೊಬ್ಬಳು ಗೆಳತಿಗೆ ತನ್ನ ದೈನಂದಿನ ಬದುಕಿನ ಸಹಜ ಸಂಗತಿಗಳನ್ನು ವಿವರಿಸುವ ಸನ್ನಿವೇಶ ಒಳಗೊಂಡ `ಏನೀ ಅದ್ಭುತವೇ' ಕವನ, ಹಾಗೆಯೇ, ಇಂದಿನ ಸ್ಥಿತಿಗೆ ರೂಪಕವಾಗಿ `ಸ್ಥಿತಿ' ಕವನ, ದೇವರ ಮಹಿಮೆ, ಅಗಾಧ ಸಾಧ್ಯತೆಗಳನ್ನು ತುಸು ವ್ಯಂಗ್ಯ, ಬೇಸರ, ವಿಷಾದದಲ್ಲಿ ಬಣ್ಣಿಸುವ ಭಾವಗೀತೆಯನ್ನೂ ಅವರು ಹಾಡಿದರು.

ಕವಿ ವಿಷ್ಣು ನಾಯಕ ವಾಚಿಸಿದ `ನನ್ನ ಅಂಬಾರಕೊಡ್ಲು' ಕವನ ಸಭಿಕರಿಗೆ ಬಹಳ ಮುದ ನೀಡಿತು. ತಮ್ಮದೇ ಊರಿನ ಚಿತ್ರಣವೆನ್ನುವಂತೆ 1973ರಲ್ಲಿ ಬರೆದ ಈ ಕವನ ಊರೊಂದು ಬದಲಾಗುತ್ತ ಸಾಗುವ ಮಜಲುಗಳನ್ನು ವ್ಯಂಗ್ಯ, ಲೇವಡಿ ಮಾಡುತ್ತ  ಆಧುನಿಕತೆಗೆ ತೆರೆದುಕೊಂಡಿದ್ದನ್ನು ಬಿಂಬಿಸುತ್ತದೆ.

`...ಗುಮಟೆ ಪಾಂಗಿನ ಪರಾಕಿಗೆ ಹೆಬ್ಬಾವು ಹೆದರಿತ್ತು, ಹೊಳೆದಾಟಿತ್ತು...
ನನ್ನೂರಿನ ತಣ್ಣೆ ಗಂಜಿಗೆ ತುಪ್ಪದ ಹಂಗಿರಲಿಲ್ಲ
ಅಪ್ಪೆ ಮಿಡಿ, ಉಪ್ಪಿನ ಕಾಯಿ, ಅಂಬಲಿ ಹಳಗನಕ್ಕಿಯ ಅನ್ನ ನಮ್ಮೂರ ಮೊಸರನ್ನ....' ಹೀಗೆ ಸಾಗುವ ಕವನವನ್ನು ಅಷ್ಟೇ ಧ್ವನಿಪೂರ್ಣವಾಗಿ ವಾಚಿಸಿದರು.

ಕವಯಿತ್ರಿ ಡಾ.ಮಾಲತಿ ಪಟ್ಟಣಶೆಟ್ಟಿ `ಕಾಡು ತಾಯೆ ಬಾ ಕಾಡು...' ಎಂಬ ಕವನದ ಮೂಲಕ ಪ್ರಸ್ತುತ ಸಮಸ್ಯೆಗಳನ್ನು ಬಿಂಬಿಸಿದರು. ಭಾಷೆಯ ಕುರಿತಾಗಿ `ಭಾಷಾ ಮಾರಣ ಹೋಮ', ಪ್ರಕೃತಿ, ನಗರೀಕರಣದ ಸಮಸ್ಯೆ ಕುರಿತಾದ `ಪ್ರಕೃತಿ ಮತು ಚಿಟ್ಟೆ' ಹಾಗೂ `ಕತ್ತಲೆ' ಕವನವನ್ನು ಅವರು ವಾಚಿಸಿದರು.
ಲೇಖಕ ಶಾಮಸುಂದರ ಬಿದರಕುಂದಿ ಗೋಷ್ಠಿಯ ನಿರ್ದೇಶಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.