ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆ ಮೇಲೆ ಪೊಲೀಸರು ಭಾನುವಾರ ಮುಗಿ ಬಿದ್ದರು. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 44 ಲಾರಿಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡರು.ಮರಳಿನ ಮೌಲ್ಯ ರೂ. 15 ಲಕ್ಷ ಎಂದು ಅಂದಾಜಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಕುರಿತು `ಪ್ರಜಾವಾಣಿ' ಆರಂಭಿಸಿರುವ ಸರಣಿಯ ಭಾನುವಾರದ ಸಂಚಿಕೆಯಲ್ಲಿ ತುಮಕೂರು ಜಿಲ್ಲೆಯ ಅಕ್ರಮ ಮರಳು ದಂಧೆ ಕುರಿತು ಸಮಗ್ರ ವರದಿ ಪ್ರಕಟವಾಗಿತ್ತು.
ಈ ವರದಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ ಅವರು ಭಾನುವಾರ ಬೆಳಿಗ್ಗೆಯೇ ಇಲಾಖೆಯ ಎಲ್ಲ ಹಿರಿ ಮತ್ತು ಕಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮರಳು ಸಾಗಣೆಯನ್ನು ತಡೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು ಎಂದು ತಿಳಿದುಬಂದಿದೆ.
`ಅಕ್ರಮ ಮರಳು ಗಣಿಗಾರಿಕೆಯಿಂದ ಜಿಲ್ಲೆಯೇ ನಾಶವಾಗುತ್ತಿದೆ. ಆದರೆ ಅಕ್ರಮ ಮರಳು ಗಣಿಗಾರಿಕೆಯನ್ನು ಇಷ್ಟು ದಿನ ಗಂಭೀರವಾಗಿ ಪರಿಗಣಿಸದ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮರಳು ದಂಧೆ ಭಾನುವಾರ ಬೆಳಿಗ್ಗೆ ವಿರುದ್ಧ ಕಳಹೆ ಊದಿದರು. ಇದಕ್ಕೆ `ಪ್ರಜಾವಾಣಿ'ಯಲ್ಲಿ ಬಂದ ವರದಿಯೇ ಕಾರಣ.
ಎಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆದರೂ ಆಯಾ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್, ಇನ್ಸ್‌ಪೆಕ್ಟರ್, ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಬ್ಬರು ಸಬ್ ಇನ್‌ಸ್ಪೆಕ್ಟರ್`ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.