ADVERTISEMENT

ಮರಿಯಾನೆ ಹಿಡಿದು ಅಂಗನವಾಡಿಯಲ್ಲಿ ಕಟ್ಟಿಹಾಕಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಹುಣಸೂರು: ಕಾಡಿನಿಂದ ಗ್ರಾಮಕ್ಕೆ ನುಗ್ಗಿದ ಎರಡು ವರ್ಷದ ಗಂಡಾನೆ ಮರಿಯನ್ನು ಗ್ರಾಮಸ್ಥರು ಹಿಡಿದು ಕಟ್ಟಿ ಹಾಕಿದ ಘಟನೆ ತಾಲ್ಲೂಕಿನ ಕೊಳವಿಗೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಿರುವ ಕೊಳವಿಗೆ ಗ್ರಾಮದ ಬಳಿ ಇರುವ ಗೆಂಡೆ ಕೆರೆಯಲ್ಲಿ ನೀರು ಕುಡಿಯಲು ಭಾನುವಾರ ರಾತ್ರಿ ಆನೆ ಗುಂಪಿನಲ್ಲಿ ಬಂದಿದ್ದ ಮರಿಯಾನೆ ತನ್ನ ಗುಂಪಿನಿಂದ ಬೇರ್ಪಟ್ಟಿದೆ.
 
ಬೆಳಿಗ್ಗೆ ಎಂದಿನಂತೆ ಗ್ರಾಮಸ್ಥರು ತಮ್ಮ ಹೊಲ ಗದ್ದೆಗೆ ತೆರಳುವ ಸಮಯದಲ್ಲಿ ಆನೆ ಮರಿ ಕೆರೆ ಬಳಿ ಇರುವುದು ಗಮನಕ್ಕೆ ಬಂತು. ಮರಿಯಾನೆ ನಿತ್ರಾಣಗೊಂಡಿರುವುದು ಖಾತ್ರಿ ಪಡಿಸಿಕೊಂಡ ಸ್ಥಳೀಯರು ಅದನ್ನು ಹಿಡಿದುಕೊಂಡು ಬಂದು ಕಟ್ಟಿ ಹಾಕಿ ಅರಣ್ಯ ಇಲಾಖೆಗೆ ವಿಷಯವನ್ನು ಮುಟ್ಟಿಸಿದರು.

ಬಾರದ ಅಧಿಕಾರಿ: ಕೊಳವಿಗೆ ಗ್ರಾಮಸ್ಥರು ಬೆಳಿಗ್ಗೆ ಆನೆ ಮರಿಯನ್ನು ಸಂರಕ್ಷಿಸಿ ಇಲಾಖೆಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಸ್ಥಳಕ್ಕೆ ಬಾರದ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಮರಿಯಾನೆಯನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿ ಹಾಕಿ ಒಣ ಬತ್ತದ ಮೇವು ಮತ್ತು ಬೆಲ್ಲ ನೀಡಿದರು. ವೀರನಹೊಸಹಳ್ಳಿ ವಲಯದ ಆರ್.ಎಫ್.ಒ.ಕಿರಣ್‌ಕುಮಾರ್ ಮತ್ತು  ತಂಡ ಭೇಟಿ ನೀಡಿ ಮರಿಯಾನೆಯನ್ನು ಮತ್ತಿಗೋಡು ವಲಯದ ಆನೇಚೌಕೂರು ಅರಣ್ಯದ ಸಾಕಾನೆ ಶಿಬಿರಕ್ಕೆ ಸಾಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.