ADVERTISEMENT

ಮರುಳಸಿದ್ದಪ್ಪ ರಾಜಕೀಯ ದಾಳ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:30 IST
Last Updated 26 ಫೆಬ್ರುವರಿ 2011, 16:30 IST

ಗುಲ್ಬರ್ಗ:  ಹಿರಿಯ ಲೋಹಿಯಾವಾದಿ ಡಾ.ಕೆ.ಮರುಳಸಿದ್ದಪ್ಪ ಅವರನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು  ರಾಜಕೀಯ ದಾಳವಾಗಿ ಬಳಸಿಕೊಂಡಿರುವುದು ಸರಿಯಲ್ಲ ಎಂದು ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ ಅಭಿಪ್ರಾಯಪಟ್ಟರು. “ಮರುಳಸಿದ್ದಪ್ಪ ಅವರ ಸ್ಪರ್ಧೆ ಕನ್ನಡಿಗರ ಸ್ವಾಭಿಮಾನದ ಸಂಕೇತ ಎಂದು ಬಿಂಬಿಸುತ್ತಿದ್ದಾರೆ.

ಹಿಂದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರನ್ನು ಕಣಕ್ಕೆ ಇಳಿಸಿದಾಗ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾಭಿಮಾನ ಎಲ್ಲಿ ಹೋಗಿತ್ತು” ಎಂದು ತರಾಟೆಗೆ ತೆಗೆದುಕೊಂಡರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, “ಗೆಲ್ಲುವ ಅವಕಾಶ ಇದ್ದಾಗ ಲಿಂಗಾಯಿತರ ಸ್ಪರ್ಧೆಗೆ ಅವಕಾಶ ನೀಡದೇ, ಸೋಲು ಖಚಿತ ಎಂಬ ಪರಿಸ್ಥಿತಿ ಇರುವಾಗ ಲಿಂಗಾಯಿತರನ್ನು ಹರಕೆಯ ಕುರಿ ಮಾಡುತ್ತಿರುವುದು ದುರ್ದೈವ.

ಲಿಂಗಾಯಿತ ಸಮಾಜದ ಬಗ್ಗೆ ಗೌರವ ಇದ್ದರೆ ಗೆಲ್ಲುವ ಅವಕಾಶ ಇದ್ದಾಗ ಈ ಸಮುದಾಯಕ್ಕೆ ಅವಕಾಶ ನೀಡಬೇಕಿತ್ತು” ಎಂದು ಹೇಳಿದರು.

“ಆಗ ಹಣದ ಆಮಿಷಕ್ಕೆ ಬಲಿಯಾಗಿ ರಾಜೀವ್ ಚಂದ್ರಶೇಖರ್ ಅವರ ಬೆಂಬಲಕ್ಕೆ ನಿಂತ ಜಾತ್ಯತೀತ ಜನತಾದಳಕ್ಕೆ ಸ್ವಾಭಿಮಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ.

ಬೇರೆ ರಾಜ್ಯದವರಾದ ಎಂ.ಎಂ.ರಾಮಸ್ವಾಮಿಯವರನ್ನು ಜೆಡಿಎಸ್ ಕರ್ನಾಟಕದಿಂದ ಗೆಲ್ಲಿಸಲಿಲ್ಲವೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.